ಮುಳ್ಳೇರಿಯ: ಮುಳಿಯಾರು ಪಂಚಾಯತಿನ ವಿವಿಧೆಡೆ ಕಳೆದ ಹಲವು ಸಮಯದಿಂದ ಚಿರತೆ ಹಾವಳಿ ಹೆಚ್ಚಾಗುತ್ತಿದ್ದಂತೆ, ಇದೇ ಮೊದಲ ಬಾರಿಗೆ ಕಾನತ್ತೂರು ಪ್ರದೇಶದಲ್ಲಿ ಚಿರತೆ ಗುಂಪಾಗಿ ಸಂಚರಿಸುತ್ತಿರುವುದನ್ನು ಸ್ಥಳೀಯರು ಕಂಡಿರುವುದಾಗಿ ಮಾಹಿತಿಯಿದೆ. ಇದರಿಂದ ಬೋವಿಕ್ಕಾನ ಆಸುಪಾಸಿನ ಜನತೆ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
ಕಾನತ್ತೂರು ಪಾಯೋತ್ ನಿವಾಸಿ ದೈವನರ್ತನ ಕಲಾವಿದ ಕೃಷ್ಣನ್ ಅವರ ಮನೆಯ ಪರಿಸರದಲ್ಲಿ ಗುರುವಾರ ನಸುಕಿಗೆ ಐದು ಚಿರತೆಗಳು ಸಂಚರಿಸುತ್ತಿರುವುದು ಕಂಡುಬಂದಿತ್ತು. ಕೃಷ್ಣನ್ ಅವರ ಪುತ್ರ ದೈವಕೋಲ ಕಾರ್ಯಕ್ರಮ ಮುಗಿಸಿ ಮನೆಗೆ ತಲುಪಿದಾಗ ಚಿರತೆಯ ಗುಂಪು ಸಂಚಿರುಸುವುದು ಗಮನಕ್ಕೆ ಬಂದಿದ್ದು, ತಕ್ಷಣ ಮನೆ ಟೆರೇಸ್‍ಗೆ ಏರಿ ಟಾರ್ಚ್ ಬೆಳಕು ಹಾಯಿಸಿದಾಗ ಕುರುಚಲು ಪೊದೆಯಲ್ಲಿ ಮರೆಯಾಗಿತ್ತು.
ಕೊಡವಂಜಿ ಅಡ್ಕ ರಸ್ತೆಯ ರಾಜನ್ ಎಂಬವರ ಮನೆಯ ಬಳಿ ಚಿರತೆಯೊಂದು ಸಾಕುನಾಯಿಯನ್ನು ಕಚ್ಚಿ ಕೊಂಡೊಯ್ಯುವ ದೃಶ್ಯವೂ ಕಂಡುಬಂದಿತ್ತು. ಇರಿಯಣ್ಣಿ, ಪೇರಡ್ಕ, ವಣ್ಣಾರತ್ ಮೂಲ ಮುಂತಾದೆಡೆ ಚಿರತೆ ಸಂಚಾರದಿಂದ ಜನತೆ ಆತಂಕಕ್ಕೀಡಾಗಿದ್ದಾರೆ. ಅರಣ್ಯಾಧಿಕಾರಿಗಳು ಈ ಪ್ರದೇಶಗಳಿಗೆ ಬೇಟಿ ನೀಡಿ ಚಿರತೆಯ ಇರುವಿಕೆಯನ್ನು ದೃಡಪಡಿಸಿದ್ದರೂ, ಚಿರತೆ ಪತ್ತೆ ಸಾಧ್ಯವಾಗಿರಲಿಲ್ಲ. ಇರಿಯಣ್ಣಿ, ಕರ್ಮಂತೋಡಿ ಎಂಬೆಡೆಗಳಲ್ಲಿ ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯಲು ಬೋನು ಇರಿಸಲಾಗಿದೆ. ಚಿರತೆ ಎರಡು ದಿನಗಳ ಹಿಂದೆಯಷ್ಟೆ ಪೀಪಲ್ಸ್ ಫಾರಂ ಆಶ್ರಯದಲ್ಲಿ ಮುಳಿಯಾರು ಅರಣ್ಯ ಇಲಾಖಾ ವಲಯ ಕಚೇರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು.
ಚಿರತೆ ಸೆರಹಿಡಿಯಲು ಇರಿಯಣ್ಣಿ, ಕರ್ಮಂತೋಡಿ ಎಂಬೆಡೆಗಳಲ್ಲಿ ಅರಣ್ಯ ಇಲಾಖೆ ಬೋನು ಇರಿಸಿದೆ.





