ಮಂಜೇಶ್ವರ: ಪ್ರಸ್ತುತ ಸಮಾಜದಲ್ಲಿ ನಮ್ಮ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಆಹಾರ ಪದ್ಧತಿ, ಈ ಸಮಸ್ಯೆಗಳನ್ನು ಸರಿ ಮಾಡಿ ಆರೋಗ್ಯ ಸ್ಥಿತಿ ಕಾಪಾಡಲು ಸಿರಿಧಾನ್ಯಗಳನ್ನು ಸೇವಿಸಬೇಕು ಎಂದು ಮಂಜೇಶ್ವರ ಉಪಜಿಲ್ಲಾ ನೂನ್ ಮೀಲ್ ಅಧಿಕಾರಿ ಪ್ರದೀಪ್ ಕುಮಾರ್ ಬಿ.ತಿಳಿಸಿದರು.
ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಸಿರಿಧಾನ್ಯ ದಿನದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಸಿರಿಧಾನ್ಯ ತಿಂಡಿ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಪಿ.ಎ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಸಿರಿಧಾನ್ಯದ ಮಹತ್ವವನ್ನು ಅರಿತುಕೊಂಡು ತಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನು ಅಳವಡಿಸಿ ಉತ್ತಮ ಆರೋಗ್ಯ ಕಾಪಾಡುವಲ್ಲಿ ಯಶಸ್ವಿ ಆಗಬೇಕೆಂದು ತಿಳಿಸಿದರು. ಬಳಿಕ ಮಾತಾಡಿದ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮೋಹನ್ ಬಿ. ಹಿರಿ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ರೋಗಗಳು ಇಂದು ಎಳೆವಯಸ್ಸಿನಲ್ಲಿ ಬರುತ್ತಿವೆ ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿ, ಹಿರಿಯರು ಸಿರಿಧಾನ್ಯ ಸೇವನೆಗಳ ಮೂಲಕ ದೀರ್ಘಾಯುಷಿಗಳಾದಂತೆ ನಾವು ಕೂಡ ಸಿರಿಧಾನ್ಯಗಳ ಸೇವನೆಯನ್ನು ಮಾಡಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕರೆಯಿತ್ತರು.
ಈ ಸಂದರ್ಭ ಅತಿಥಿ ಗಣ್ಯರು ವಿದ್ಯಾರ್ಥಿಗಳ ಅಭೂತಪೂರ್ವ ತಿಂಡಿ ಪ್ರದರ್ಶನವನ್ನು ವೀಕ್ಷಿಸಿ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ಬಿ. ಸ್ವಾಗತಿಸಿ, ಹಿರಿಯ ಶಿಕ್ಷಕಿ ಉಷಾಬೇಬಿ ವಂದಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಸಂದೀಪ್ ಆರ್ ಬಳ್ಳಾಲ್ ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಎಮ್ ಪಿ ಟಿ ಎ ಅಧ್ಯಕ್ಷೆ ರಿಯಾನ, ಪಿಟಿಎ ಸದಸ್ಯ ಅಬ್ದುಲ್ ಅಝಿಜ್ , ಶಿಕ್ಷಕರು ಹಾಗೂ ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.

.jpg)
.jpg)

