ಕಾಸರಗೋಡು: ಗ್ರಂಥಾಲಯ ಸಂಘದೊಂದಿಗೆ ಸಂಯೋಜಿತವಾಗಿರುವ ಗ್ರಂಥಾಲಯಗಳ ಕಾರ್ಯದರ್ಶಿಗಳು ಮತ್ತು ಗ್ರಂಥಪಾಲಕರಿಗೆ ವಿಮಾ ರಕ್ಷಣೆಯನ್ನು ಖಚಿತಪಡಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಅವರು ಕಾಸರಗೋಡು ವಿದ್ಯಾನಗರದ ಉದಯಗಿರಿಯಲ್ಲಿ ನಿರ್ಮಿಸಲಾದ ಕೇರಳ ಲೈಬ್ರರಿ ಕೌನ್ಸಿಲ್ ತರಬೇತಿ ಸಂಸ್ಥೆ ಉದ್ಘಾಟಿಸಿ ಮಾತನಾಡಿದರು.
ವಿಮಾರಕ್ಷಣೆ ಜಾರಿಯಾದಲ್ಲಿ 15000 ಜನರು ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ರಾಜ್ಯದಲ್ಲಿ 10ಸಾವಿರ ಗ್ರಂಥಾಲಯಗಳು ಸಂಘದೊಂದಿಗೆ ಸಂಯೋಜಿತವಾಗಿದೆ.
ಓದುವ ಹವ್ಯಾಸ ಬೆಳೆಸಿಕೊಳ್ಳುವವರು ಒಬ್ಬ ಉತ್ತಮ ಚಿಂತಕನಾಗಲು ಸಾಧ್ಯ. ಹಳ್ಳಿ ಪ್ರದೇಶದಲ್ಲಿ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಓದುವ ಹಬ್ಬ, ಮಕ್ಕಳ ಮನೆ ಗ್ರಂಥಾಲಯ ಸೇವೆ, ಜೈಲು ಗ್ರಂಥಾಲಯಗಳು ಮುಂತಾದ ವಿವಿಧ ಪ್ರದೇಶಗಳಲ್ಲಿ ಓದುವಿಕೆಗೆ ಪ್ರೇರಣೆ ನೀಡುತ್ತಿರುವ ಗ್ರಂಥಾಲಯ ಸಮಿತಿಯ ಸಾಧನೆ ಶ್ಲಾಘನೀಯ. ಪುಸ್ತಕಗಳು ನೀಡುವ ಅರಿವು, ಮೂಢನಂಬಿಕೆ-ಅನಾಚಾರಗಳ ವಿರುದ್ಧ ಬೆಳಕು ಚೆಲ್ಲುವಂತಾಗಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಕೇರಳವನ್ನು ಬಾಧಿಸಿದ್ದ ಕೋವಿಡ್ ಮತ್ತು ಪ್ರವಾಹದ ಅವಧಿಯಲ್ಲಿ ಗ್ರಂಥಾಲಯ ಸಮಿತಿ 4.5 ಕೋಟಿ ರೂ. ಮೊತ್ತ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಸಮರ್ಪಿಸಿದೆ. ಮುಂಡಕೈ ಮತ್ತು ಚೂರಲ್ಮಲದ ಜನತೆಗಾಗಿ 14 ಮನೆ ಹಾಗೂ ಒಂದು ಗ್ರಂಥಾಲಯ ನಿರ್ಮಿಸಿಕೊಡಲು ಮುಂದಾಗಿದ್ದು, ಈಗಾಗಲೇ 1 ಕೋಟಿ ರೂ.ಹಸ್ತಾಂತರಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಗ್ರಂಥಲೋಕದ ಪ್ರಧಾನ ಸಂಪಾದಕ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ.ವಿ.ಕೆ.ಪನಯಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಭಾಷಣ ಮಾಡಿದರು. 'ಗ್ರಂಥಲೋಕ'ದ ಪ್ರಧಾನ ಸಂಪಾದಕ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ.ವಿ.ಕೆ.ಪನಯಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಸರಗೋಡು ಜಿಲ್ಲಾ ಗ್ರಂಥಾಲಯ ಪರಿಷತ್ ಅಧ್ಯಕ್ಷ ಕೆ.ವಿ.ಕುಞÂರಾಮನ್ ವರದಿ ಮಂಡಿಸಿದರು. ಶಾಸಕರಾದ ಸಿ.ಎಚ್.ಕುಞಂಬು, ಎಂ.ರಾಜಗೋಪಾಲನ್, ಎ.ಕೆ.ಎಂ.ಅಶ್ರಫ್, ರಾಜ್ಯ ಗ್ರಂಥಾಲಯ ಪರಿಷತ್ತಿನ ಉಪಾಧ್ಯಕ್ಷ ಎ.ಪಿ.ವಿಜಯನ್, ಜತೆ ಕಾರ್ಯದರ್ಶಿ ಮನಾಯತ್ ಚಂದ್ರನ್, ಗ್ರಂಥಾಲಯ ಆಂದೋಲನ ಹಾಗೂ ಸಾಮಾಜಿಕ-ಸಾಂಸ್ಕøತಿಕ ಕ್ಷೇತ್ರದ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಕೇರಳ ಸ್ಟೇಟ್ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ವಿ.ಕೆ.ಮಧು ಸ್ವಾಗತಿಸಿದರು. ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಪಿ.ಪ್ರಭಾಕರನ್ ವಂದಿಸಿದರು..
ಸರ್ಕಾರದಿಂದ ಮಂಜೂರಾದ 27.5 ಸೆಂಟ್ಸ್ ಜಾಗದಲ್ಲಿ 2.25 ಕೋಟಿ ರೂ ವೆಚ್ಚದಲ್ಲಿ ತರಬೇತಿ ಸಂಸ್ಥೆ ಕಟ್ಟಡ ನಿರ್ಮಿಸಲಾಗಿದೆ.






