HEALTH TIPS

ಪತ್ನಿಯಿಂದ ಕ್ರೌರ್ಯ, ಪತಿಗೆ ವಿಚ್ಛೇದನ ಪಡೆಯಲು ಅನುಮತಿ ನೀಡಿದ ಕಲ್ಕತ್ತ ಹೈಕೋರ್ಟ್

 ಕೋಲ್ಕತ್ತ: ಪತಿಗೆ ಕಲ್ಕತ್ತ ಹೈಕೋರ್ಟ್‌ ಕ್ರೌರ್ಯದ ಆಧಾರದಲ್ಲಿ ವಿಚ್ಛೇದನ ಪಡೆಯಲು ಅನುಮತಿ ನೀಡಿದೆ. ಪತ್ನಿಯ ಸ್ನೇಹಿತೆ ಮತ್ತು ಕುಟುಂಬದ ಸದಸ್ಯರನ್ನು ಪತಿಯ ಮೇಲೆ 'ಹೇರಿದ್ದುದು', ವೈವಾಹಿಕ ದೌರ್ಜನ್ಯದ ಸುಳ್ಳು ಪ್ರಕರಣವನ್ನು ಪತ್ನಿಯು ದಾಖಲಿಸಿದ್ದುದು ಕ್ರೌರ್ಯ ಎಂದು ಹೈಕೋರ್ಟ್‌ ಹೇಳಿದೆ.

ಪತಿಯ ಪರವಾಗಿ ವಿಚ್ಛೇದನದ ಆದೇಶ ನೀಡಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿಗಳಾದ ಸವ್ಯಸಾಚಿ ಭಟ್ಟಾಚಾರ್ಯ ಮತ್ತು ಉದಯ್ ಕುಮಾರ್ ಇರುವ ವಿಭಾಗೀಯ ಪೀಠವು ಅನೂರ್ಜಿತಗೊಳಿಸಿದೆ.

ಪತಿಯು ತಾನು ಪತ್ನಿಯಿಂದ ಮಾನಸಿಕ ಕ್ರೌರ್ಯ ಎದುರಿಸಿದ್ದುದನ್ನು ಸಾಬೀತು ಮಾಡಿದ್ದಾನೆ ಎಂದು ವಿಭಾಗೀಯ ಪೀಠವು ಹೇಳಿದೆ. ಪತ್ನಿಯ ಸ್ನೇಹಿತೆ ಹಾಗೂ ಆಕೆಯ ಕುಟುಂಬದ ಸದಸ್ಯರು, ಪತಿಯ ಆಕ್ಷೇಪದ ಹೊರತಾಗಿಯೂ, ಆತನಿಗೆ ತೊಂದರೆ ಆಗುತ್ತಿದ್ದರೂ ಆತನ ಮನೆಯಲ್ಲಿ ದೀರ್ಘಾವಧಿಗೆ ಇರುತ್ತಿದ್ದರು ಎಂಬುದು ದಾಖಲೆಗಳಿಂದ ಸಾಬೀತಾಗಿದೆ ಎಂದು ಪೀಠವು ಹೇಳಿದೆ.

'ಸ್ನೇಹಿತೆ ಮತ್ತು ಕುಟುಂಬದ ಸದಸ್ಯರನ್ನು ಪತ್ನಿಯು ತನ್ನ ಪತಿಯ ಮೇಲೆ ದೀರ್ಘ ಅವಧಿಗೆ ಹೇರಿದ್ದುದನ್ನು, ಕೆಲವು ಸಂದರ್ಭಗಳಲ್ಲಿ ಪತ್ನಿ ಅಲ್ಲಿ ಇಲ್ಲದಿದ್ದಾಗಲೂ ಅವರು ಅಲ್ಲಿ ಇರುತ್ತಿದ್ದುದನ್ನು ಕ್ರೌರ್ಯವೆಂದು ಖಂಡಿತವಾಗಿಯೂ ಪರಿಗಣಿಸಬಹುದು. ಏಕೆಂದರೆ ಆ ಸ್ಥಿತಿಯು ಪತಿಗೆ ಜೀವನವನ್ನು ಅಸಹನೀಯಗೊಳಿಸಿರಬಹುದು. ಇದು ಕ್ರೌರ್ಯದ ವಿಸ್ತೃತ ವ್ಯಾಪ್ತಿಯಲ್ಲಿ ಬರುತ್ತದೆ' ಎಂದು ಪೀಠವು ಹೇಳಿದೆ.

ಇವರಿಬ್ಬರು 2005ರ ಡಿಸೆಂಬರ್ 15ರಂದು ಮದುವೆ ಆಗಿದ್ದರು. ಪತಿಯು 2008ರ ಸೆಪ್ಟೆಂಬರ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಅದೇ ವರ್ಷ ಪತ್ನಿಯು, ತನ್ನ ಪತಿ ಹಾಗೂ ಆತನ ಕುಟುಂಬದ ಸದಸ್ಯರ ವಿರುದ್ಧ ದೂರೊಂದನ್ನು ನಬದ್ವೀಪ್ ಪೊಲೀಸ್‌ ಠಾಣೆಗೆ ನೋಂದಾಯಿತ ಅಂಚೆ ಮೂಲಕ ರವಾನಿಸಿದ್ದರು. ಈ ದೂರು ಆಧರಿಸಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 498(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪತ್ನಿ ದಾಖಲಿಸಿದ್ದ ಪ್ರಕರಣದಲ್ಲಿ ಇವರನ್ನು ದೋಷಮುಕ್ತಗೊಳಿಸಿ ಕ್ರಿಮಿನಲ್ ನ್ಯಾಯಾಲಯವು ನೀಡಿದ್ದ ಆದೇಶವನ್ನು ಪತಿಯ ಪರ ವಕೀಲರು ಹೈಕೋರ್ಟ್‌ ಪೀಠಕ್ಕೆ ಸಲ್ಲಿಸಿದ್ದರು. ದೂರು ನೀಡಿದ ಸಂದರ್ಭ ಹಾಗೂ ದೋಷಮುಕ್ತಗೊಳಿಸಿ ಕೋರ್ಟ್ ನೀಡಿದ ಆದೇಶವು ಈ ದೂರು ಸುಳ್ಳಾಗಿತ್ತು ಎಂಬುದನ್ನು ತೋರಿಸುತ್ತವೆ ಎಂದು ವಕೀಲರು ವಾದಿಸಿದ್ದರು. ಆಧಾರ ಇಲ್ಲದ ಆರೋಪ ಕೂಡ ಕ್ರೌರ್ಯಕ್ಕೆ ಸಮ ಎಂದು ವಕೀಲರು ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries