HEALTH TIPS

ಮಹಾಕುಂಭ ಮೇಳ 2025: ಯಾತ್ರಿಕರ ಸುರಕ್ಷತೆಗಾಗಿ 50,000 ಪೊಲೀಸ್ ಸಿಬ್ಬಂದಿ ನಿಯೋಜನೆ

 ಲಖನೌ: ಮಹಾಕುಂಭ ಮೇಳಕ್ಕೆ ಆಗಮಿಸುವ ಯಾತ್ರಿಕರ ಸುರಕ್ಷತೆಗಾಗಿ ಪ್ರಯಾಗರಾಜ್‌ನಾದ್ಯಂತ 50,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಸೋಮವಾರ ಹೇಳಿದ್ದಾರೆ.

'ಪಿಟಿಐ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ಉಗ್ರರ ಬೆದರಿಕೆಗಳು, ಸೈಬರ್ ದಾಳಿ, ಡ್ರೋನ್‌ ದಾಳಿ ಸೇರಿದಂತೆ ಮಾನವ ಕಳ್ಳಸಾಗಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ನಿಗಾವಹಿಸಲಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ ಮೇಳವು ಜನವರಿ 13ರಿಂದ ಫೆಬ್ರುವರಿ 26ರವರೆಗೆ ನಡೆಯಲಿದೆ. ಮಹಾಕುಂಭದಲ್ಲಿ ಸುಮಾರು 45 ಕೋಟಿ ಯಾತ್ರಿಕರು ಭಾಗವಹಿಸುವ ನಿರೀಕ್ಷೆ ಇದೆ. ಜತೆಗೆ, ಸ್ವತಃ ಡಿಜಿಪಿ ಅವರೇ ಸುರಕ್ಷತೆಗೆ ಸಂಬಂಧಿಸಿದ ಕ್ರಮಗಳ ಕುರಿತು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಕ್ತರ ಸುರಕ್ಷತೆಗಾಗಿ 'ಆಯಂಟಿ ಡ್ರೋನ್‌ ಸಿಸ್ಟಮ್‌' ಅನ್ನು ಈಗಾಗಲೇ ಸಕ್ರಿಯಗೊಳಿಸಲಾಗಿದ್ದು, ವ್ಯವಸ್ಥೆಯನ್ನು ನಿರ್ವಹಿಸಲು ನುರಿತ ತಜ್ಞರನ್ನು ನಿಯೋಜಿಸಲಾಗಿದೆ. ತಜ್ಞರು ಕೇಂದ್ರ ಸ್ಥಳದಲ್ಲಿ ಕುಳಿತು ಸುತ್ತಮುತ್ತಲಿನ ಎಲ್ಲಾ ಡ್ರೋನ್‌ಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅಗತ್ಯವಿದ್ದರೆ, ಯಾವುದೇ ಅನುಮಾನಾಸ್ಪದ ಡ್ರೋನ್ ಅಥವಾ ಇತರೆ ಸಾಧನಗಳನ್ನು ನಿಷ್ಕ್ರಿಯಗೊಳಿಸುವ ಅಧಿಕಾರ ಹೊಂದಿದ್ದಾರೆ ಎಂದು ಪ್ರಶಾಂತ್ ಕುಮಾರ್‌ ಹೇಳಿದ್ದಾರೆ.

ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಅಪರಾಧಿಗಳಿಂದ ಯಾತ್ರಿಕರನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜತೆಗೆ ಇದೇ ಮೊದಲ ಬಾರಿಗೆ ಕುಂಭಮೇಳ ನಡೆಯುವ ಪ್ರದೇಶದಲ್ಲಿ ಸೈಬರ್ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ. ಸೈಬರ್ ಗಸ್ತು ಮತ್ತು ಸೈಬರ್ ಭದ್ರತಾ ನೆಟ್‌ವರ್ಕ್‌ಗಳನ್ನು ವಿಶ್ಲೇಷಿಸಲು ರಾಷ್ಟ್ರೀಯ ಏಜೆನ್ಸಿಗಳನ್ನು ಸಂಪರ್ಕಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

2019ರ ಕುಂಭಕ್ಕೆ ಹೋಲಿಸಿದರೆ ಈ ಬಾರಿ ಭದ್ರತೆಗಾಗಿ ಶೇಕಡ 40ರಷ್ಟು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುವುದು. ಜತೆಗೆ, ಜನಸಂದಣಿ ನಿರ್ವಹಣೆ ಮತ್ತು ಸಂಚಾರ ನಿಯಮಗಳಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

'ಪ್ರಯಾಗರಾಜ್‌ನಲ್ಲಿ ನಡೆಯುವ ಕುಂಭಮೇಳ ಹಾಗೂ ಮಹಾ ಕುಂಭಕ್ಕೆ ಕೋಟ್ಯಂತರ ಯಾತ್ರಿಕರು ಭೇಟಿ ನೀಡುವುದು ವಾಡಿಕೆ. ಆದರೆ ಸುಧಾರಿತ ತಂತ್ರಜ್ಞಾನದ ಕೊರತೆಯಿಂದಾಗಿ, ಮೇಳಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯನ್ನು ಲೆಕ್ಕ ಹಾಕುವುದು ಈವರೆಗೆ ಸವಾಲಾಗಿತ್ತು. ಹಾಗಾಗಿ, ಈ ಬಾರಿ ಎ.ಐ ಆಧಾರಿತ 2,700 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುತ್ತಿದ್ದು, ಯಾತ್ರಿಕರ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಲಿದೆ' ಎಂದಿದ್ದಾರೆ.

ಮಹಿಳೆಯರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಮಹಿಳಾ ಪೊಲೀಸ್ ಠಾಣೆಗಳು, 10 ಪಿಂಕ್ ಬೂತ್‌ಗಳು ಮತ್ತು ಮಹಿಳಾ ಪೊಲೀಸ್ ಪಡೆಯ ದೊಡ್ಡ ತುಕಡಿಯನ್ನು ನಿಯೋಜಿಸಲಾಗುವುದು ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries