ಪೆರ್ಲ: ಪೆರ್ಲ ಪೇಟೆಯಲ್ಲಿ ದಿನಗಳ ಹಿಂದೆ ಉಂಟಾಗಿದ್ದ ಬೆಂಕಿ ಆಕಸ್ಮಿಕದಲ್ಲಿ ಸಂಪೂರ್ಣ ನಾಶಗೊಂಡಿರುವ ಏಳು ವ್ಯಾಪಾರಿ ಸಂಸ್ಥೆಗಳಿಗೆ ಅಲ್ಲಿನ ಜಾಗ ತೆರವುಗೊಳಿಸಿ ತೆರಳುವಂತೆ ಲೋಕೋಪಯೋಗಿ ಇಲಾಖೆ ಹೊರಡಿಸಿರುವ ನೋಟೀಸು ವ್ಯಾಪಕ ಅಸಮಧಾನಕ್ಕೆ ಕಾರಣವಾಗಿದೆ. ಜೀವನೋಪಾಯಕ್ಕಾಗಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳು ತಮ್ಮ ಸಂಸ್ಥೆ ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾದ ಸಂಕಷ್ಟದಲ್ಲಿರುವ ಮಧ್ಯೆ ಇಲಾಖೆ ಹೊರಡಿಸಿರುವ ಈ ನೋಟೀಸು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪಿಡಬ್ಲ್ಯೂಡಿ ಪರಂಬೋಕ್ ಸ್ಥಳದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಏಳು ದಿವಸದೊಳಗೆ ಕಟ್ಟಡ ತೆರವುಗೊಳಿಸಬೇಕು ಅಥವಾ ದಿನವೊಂದಕ್ಕೆ 500ರೂ.ನಂತೆ ದಂಡ ವಸೂಲಿ ಮಾಡಲಾಗುವುದು ಎಂದೂ ನೋಟೀಸಿನಲ್ಲಿ ತಿಳಿಸಲಾಗಿದೆ. ಬೆಂಕಿಯ ಕಾವು ಆರುವ ಮುನ್ನ ಲೋಕೋಪಯೋಗಿ ಇಲಾಖೆ ಈ ನೋಟೀಸು ಜಾರಿಗೊಳಿಸುವ ಮೂಲಕ ವ್ಯಾಪಾರಿ ಸಮುದಾಯದ ಆಕ್ರೋಶ ಎದುರಿಸುವಂತಾಗಿದೆ. ವಿಪರ್ಯಾಸವೆಂದರೆ ಈ ಜಾಗದ ವ್ಯಾಜ್ಯವೊಂದು ನ್ಯಾಯಾಲಯದಲ್ಲಿ ದೀರ್ಘ ಕಾಲದಿಂದ ಜಾರಿಯಲ್ಲಿರುವ ಮಧ್ಯೆ ಇಂತಹ ನೋಟೀಸು ಜಾರಿ ಮಾಡುವ ಮೂಲಕ ಇಲಾಖೆ ನ್ಯಾಯಾಲಯ ನಿಂದನೆಗೂ ಕಾರಣವಾಗುವ ಸಾಧ್ಯತೆ ಎದುರಾಗಿದೆ.
ಬಿಜೆಪಿ ಖಂಡನೆ:
ಖಾಸಗಿ ಜಮೀನಿನಲ್ಲಿರುವ ಕಟ್ಟಡಗಳಲ್ಲಿ ಬಾಡಿಗೆ ಪಡೆದು ವರ್ಷಗಟ್ಟಲೆ ವ್ಯಾಪಾರ ಮಾಡುತ್ತಿರುವವರನ್ನು ತೆರವು ಮಾಡುವಂತೆ ಸರ್ಕಾರ ಸೂಚಿಸಿರುವುದು ಖಂಡನೀಯ. ಬೆಂಕಿಯ ಕಾವು ಆರುವ ಮೊದಲೇ ವ್ಯಾಪಾರಿ ಸಂಸ್ಥೆಯನ್ನು ತೆರವುಗೊಳಿಸಲು ನೋಟೀಸು ನೀಡುವ ಮೂಲಕ ಸರ್ಕಾರ ಮಾನವೀಯತೆಯನ್ನು ಹೊಸಕಿಹಾಕಿದೆ. ಸರ್ಕಾರ ಜಾರಿಗೊಳಿಸಿರುವ ನೋಟೀಸು ಹಿಂದಕ್ಕೆ ಪಡೆದು, ಸರ್ಕಾರ ವ್ಯಾಪಾರಿಗಳಿಗೆ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು. ಘಟನೆ ಬಗ್ಗೆ ವ್ಯಾಪಾರಿಗಳು ಸಂಶಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ಕೈವಾಡದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ.





