ಕಾಸರಗೋಡು : ತಳಂಗರೆ ತೆರುವತ್ ಎಂಬಲ್ಲಿ ಮದುವೆ ಮನೆಯಲ್ಲಿ ಚಪ್ಪರ ತೆಗೆಯುವ ಮಧ್ಯೆ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ, ಬಾಗೇವಾಡಿ ನಿವಾಸಿ ಪ್ರಮೋದ್ ರಾಮಣ್ಣ(30) ಮೃತಪಟ್ಟಿದ್ದಾರೆ. ಗುರುವಾರ ಮದ್ಯಾಹ್ನ ಈ ಘಟನೆ ನಡೆದಿದೆ. ತೆರುವತ್ತಿನ ಮನೆಯಲ್ಲಿ ಮದುವೆ ಸಮಾರಂಭ ನಡೆದಿದ್ದು ಚೆರ್ಕಳದ ಸಂಸ್ಥೆಯೊಂದು ಚಪ್ಪರದ ಗುತ್ತಿಗೆ ವಹಿಸಿಕೊಂಡಿತ್ತು. ಮದುವೆ ಕಳೆದ ನಂತರ ಚಪ್ಪರ ಇಳಿಸಲು ಪ್ರಮೋದ್‍ರಾಮಣ್ಣ ಹಾಗೂ ಇತರ ಕಾರ್ಮಿಕರು ಆಗಮಿಸಿದ್ದರು. ಚಪ್ಪರದ ಕಬ್ಬಿಣದ ರಾಡ್ ಲಾರಿಗೆ ಹತ್ತಿಸುವ ಮಧ್ಯೆ ಅದು ವಿದ್ಯುತ್ ತಂತಿಗೆ ತಾಗಿ ಶಾಕ್ ತಗುಲಿದೆ. ತಕ್ಷಣ ಪ್ರಮೋದ್ ಅವರನ್ನು ತಳಂಗರೆ ಮಾಲಿಕ್-ದೀನಾರ್ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆ ಮೃತಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.





