ಕಾಸರಗೋಡು: ಹದಿನಾರರ ಹರೆಯದ ಬಾಲಕನ ಕೈ ತೋಳಿನಲ್ಲಿದ್ದ 13ಸೆ.ಮೀ ಉದ್ದದ ಅತ್ಯಪೂರ್ವ ಹುಳುವನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೊರತೆಗೆದಿದ್ದಾರೆ. ಕಾಸರಗೋಡು ಚೆಂಗಳದ ಇ.ಕೆ ನಾಯನಾರ್ ಸಹಕಾರಿ ಆಸ್ಪತ್ರೆ ವೈದ್ಯರಾದ ವಿಶಾಖ್ ಕರಿಚ್ಚೇರಿ ಹಾಗೂ ಹರಿಕಿರಣ್ ಬಂಗೇರ ನೇತೃತ್ವದ ವೈದ್ಯರ ತಂಡ ಎರಡು ತಾಸುಗಳ ಕಾಲ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಹುಳುವನ್ನು ಹೊರತೆಗೆದಿದ್ದಾರೆ.
ಕಳೆದ ಒಂದು ವರ್ಷದಿಂದ ಬಾಲಕಗೆ ಕೈಯಲ್ಲಿ ಅತಿಯಾದ ನೋವು ಕಾಣಿಸಿಕೊಂಡಿದ್ದು, ಕಳೆದ ಮೂರು ತಿಂಗಳಿಂದೀಚೆಗೆ ಅಸಹನೀಯವಾಗಿ ಕಾಡುತ್ತಿತ್ತು. ಈ ನಿಟ್ಟಿನಲ್ಲಿ ಆಸ್ಪತ್ರೆ ವೈದ್ಯರನ್ನು ಭೇಟಿಯಾಗಿ ಸ್ಕ್ಯಾನ್ ನಡೆಸಿದಾಗ ಕೈತೋಳಿನಲ್ಲಿ ಡಿರೋ ಫೈಲೇರಿಯಾ ಬಾಧಿಸಬಹುದಾದ ಹುಳು ಬೆಳೆಯುತ್ತಿರುವುದು ಕಂಡುಬಂದಿತ್ತು. ಈ ನಿಟ್ಟಿನಲ್ಲಿ ವೈದ್ಯರ ಶಿಫಾರಸಿನ ಮೇರಗೆ ಶಸ್ತ್ರಚಿಕಿತ್ಸೆ ನಡೆಸಿ ಹುಳುವನ್ನು ಹೊರತೆಗೆಯಲಾಗಿದೆ. ಸಾಮಾನ್ಯವಾಗಿ ಕಾಲುಗಳಲ್ಲಿ ಕಂಡುಬರುವ ಈ ಹುಳು ಆನೆಕಾಳು ರೋಗಕ್ಕೆ ಕಾರಣವಾಗುತ್ತಿದೆ. ಇದು ಕೈಗಳಲ್ಲಿ ಕಾಣಿಸಿಕೊಳ್ಳುವುದು ಅತ್ಯಪೂರ್ವವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

