ಕಾಸರಗೋಡು: ಪತ್ರಕರ್ತ, ಕಲಾವಿದ ವೇಣುಗೋಪಾಲ(ವೀಜಿ) ಕಾಸರಗೋಡು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ನೀಡುವ ಈ ಬಾರಿಯ ವಿಶೇಷ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗಡಿನಾಡಿನಲ್ಲಿ ಕಳೆದ 25 ವರ್ಷಗಳಿಂದ ಪತ್ರಕರ್ತರಾಗಿ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಜ.18 ಹಾಗೂ 19ರಂದು ತುಮಕೂರಿನಲ್ಲಿ ನಡೆಯುವ ಕನ್ನಡ ಪತ್ರಕರ್ತರ 29ನೇ ರಾಜ್ಯಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾಸರಗೋಡಿನಲ್ಲಿ ವಿವಿಧ ಪತ್ರಿಕೆಗಳಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಇವರು ಪ್ರಸಕ್ತ ಪ್ರಜಾವಾಣಿ ಕಾಸರಗೋಡು ಜಿಲ್ಲಾ ವರದಿಗಾರರಾಗಿದ್ದಾರೆ. ಕೇರಳ ವಾರ್ತಾ ಇಲಾಖೆಯಲ್ಲಿ ಕನ್ನಡ ವಿಭಾಗದ ಸಹಾಯಕ ಮಾಹಿತಿ ಅಧಿಕಾರಿಯಾಗಿ ಸಲ್ಲಿಸಿದ್ದರು. ಕನ್ನಡ ಪತ್ರಿಕೋದ್ಯಮ ಮತ್ತು ಯಕ್ಷಗಾನ ಕ್ಷೇತ್ರದ ಪ್ರಧಾನವಾಹಿನಿಯಲ್ಲಿ ಅವರು 25 ವರ್ಷಗಳಿಂದ ಸತತ ಸಾಧನೆಯಲ್ಲಿದ್ದಾರೆ. ತಾಳಮದ್ದಲೆಗಳಲ್ಲಿ ಅರ್ಥಧಾರಿಯಾಗಿ ಬಹುಬೇಡಿಕೆ ಹೊಂದಿರುವವರು. ಉಳಿದಂತೆ ಕಲಾಸಂಘಟಕ, ಚಲನಚಿತ್ರ ನಟ, ರಂಗಭೂಮಿ ಕಲಾವಿದ, ವಾಗ್ಮಿ, ಕಾರ್ಯಕ್ರಮ ನಿರೂಪಕ, ರಸಮಂಜರಿಗಳಲ್ಲಿ ಹಾಡುಗಾರ ಹೀಗೆ ಬಹುಮುಖ ಪ್ರತಿಭೆ ಹೊಂದಿದ್ದಾರೆ.




