ಕುಂಬಳೆ: ಉದ್ಯೋಗಖಾತ್ರಿ ಕೆಲಸದ ಮಧ್ಯೆ ಕುಸಿದು ಬಿದ್ದು ಪತಿ ಮೃತಪಟ್ಟ ಬೆನ್ನಿಗೆ, ಅಂಗನವಾಡಿ ಸಹಾಯಕಿಯಾಗಿ ದುಡಿಯುತ್ತಿದ್ದ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕುಂಬಳೆ ಸನಿಹದ ಪುತ್ತಿಗೆಯಲ್ಲಿ ನಡೆದಿದೆ.
ಪುತ್ತಿಗೆ ಪಂಚಾಯಿತಿ ಬಾಡೂರು ಪ.ಜಾತಿ ಕಾಲನಿ ನಿವಾಸಿ ಸಂಜೀವ(55)ಹಾಗೂ ಇವರ ಪತ್ನಿ ಸುಂದರಿ(50)ಮೃತಪಟ್ಟವರು. ಗುರುವಾರ ಬಾಡೂರು ಸನಿಹದ ಚಾಕಟಚಾಲ್ ಎಂಬಲ್ಲಿ ಉದ್ಯೋಗ ಖಾತ್ರಿ ಕೆಲಸದ ಮಧೈ ಸಂಜೀವ ಕುಸಿದು ಬಿದ್ದಿದ್ದು, ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಸಂಜೀವ ಅವರ ಮೃತದೇಹ ಮನೆಯಲ್ಲಿ ತಂದು ಅಂತ್ಯ ಸಂಸ್ಕಾರ ನಡೆಸಲಾಗಿದ್ದು, ಕಾರ್ಯಕ್ರಮ ಕಳೆದ ಕೆಲವೇ ತಾಸುಗಳಲ್ಲಿ ಸುಂದರಿ ಅವರೂ, ಮನೆಯಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಇವರನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗಿನ 2ರ ವೇಳೆಗೆ ಸುಂದರಿ ಅವರೂ ಕೊನೆಯುಸಿರೆಳೆದಿದ್ದರು. ಸುಂದರಿ ಅವರು ಪುತ್ತಿಗೆ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದು, ಪ್ರಸಕ್ತ ಸಿಡಿಎಸ್ ಸದಸ್ಯೆಯಾಗಿದ್ದರು. ಅಲ್ಲದೆ ಕುಂಬಳೆ ವನಿತಾ ಕೋಓಪರೇಟಿವ್ ನಿರ್ದೇಶಕಿಯಾಗಿದ್ದರು. ತಾಸುಗಳ ಅಂತರದಲ್ಲಿ ನಡೆದಿರುವ ದಂಪತಿ ಸಾವು ನಾಡಿನ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ.





