ಕಾಸರಗೋಡು: ಪಿಣರಾಯಿ ವಿಜಯನ್ ನೇತೃತ್ವದ ಕೇರಳದ ಎಡರಂಗ ಸರ್ಕಾರ ಪಡಿತರ ವಿತರಕರಿಗೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸದೆ, ಆಹಾರ ವಿತರಣಾ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಯತ್ನಿಸುತ್ತಿರುವುದಾಗಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ಆರೋಪಿಸಿದ್ದಾರೆ.
ಕೇರಳದಲ್ಲಿ ಎಡರಂಗ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ಸಂಪೂರ್ಣ ವಿಫಲವಾಗಿದ್ದು, ರಾಜ್ಯದಲ್ಲಿ ಅಭಿವೃದ್ಧಿಕಾರ್ಯಗಳು ಸ್ಥಗಿತಗೊಳ್ಳುವಂತಾಗಿದೆ. ಪ್ರಸಕ್ತ ವಿತರಕರು ತಮ್ಮ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸದ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರದಲ್ಲಿ ಅಕ್ಕಿ, ಗೋಧಿ, ಹಿಟ್ಟು ಮುಂತಾದ ಅಗತ್ಯ ವಸ್ತುಗಳ ವಿತರಣೆ ಸ್ಥಗಿತಗೊಳ್ಳುವಂತಾಗಿದೆ. ಪಡಿತರ ಲಭ್ಯವಾಗದೆ, ಜನರು ಮಾರುಕಟ್ಟೆಯಿಂದ ಹೆಚ್ಚಿನ ದರದಲ್ಲಿ ಈ ವಸ್ತುಗಳನ್ನು ಖರೀದಿಸುವ ಪರಿಸ್ಥಿತಿ ಎದುರಾಗಿದ್ದು, ಇದರಿಂದ ಜನಸಾಮಾನ್ಯರ ಕುಟುಂಬದ ಬಜೆಟ್ ಅಸ್ತವ್ಯಸ್ತವಾಗಿದೆ.
ಅದಲುಬದಲಾಗಿ ಅದಿಕಾರಕ್ಕೆ ಬರುವ ಯುಡಿಎಫ್ ಮತ್ತು ಎಲ್‍ಡಿಎಫ್ ಸರ್ಕಾರಗಳು ನಡೆಸಿಕೊಂಡು ಬರುತ್ತಿರುವ ಭ್ರಷ್ಟಾಚಾರದಿಂದ ಕೇರಳದ ಆರ್ಥಿಕ ಸ್ಥಿತಿ ಹದಗೆಡಲು ಕಾರಣವಾಗಿದೆ. ಈ ಬಿಕ್ಕಟ್ಟಿನ ಪರಿಸ್ಥಿತಿಗೆ ಉಭಯ ರಂಗಗಳು ಕಾರಣವಾಗಿದೆ. ಸರ್ಕಾರ ಎದುರಿಸುತ್ತಿರುವ ವಿಷಮ ಪರಿಸ್ಥಿತಿಗೆ ಕಾರಣವಾಗಿರುವ ಎಡರಂಗ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಎಂ.ಎಲ್ ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.





