ಇಂಫಾಲ್: ಮಣಿಪುರದಲ್ಲಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಿಂಪಡೆದಿದೆ.
ಮಣಿಪುರದ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಜೆಡಿಯು ಪತ್ರ ಬರೆದು ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆದಿರುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ.
ಮಣಿಪುರ ವಿಧಾನಸಭೆಯಲ್ಲಿ ಜೆಡಿಯು ಪಕ್ಷದಿಂದ ಒಬ್ಬರೇ ಶಾಸಕರಿದ್ದಾರೆ. ಬೆಂಬಲ ಹಿಂಪಡೆದಿರುವುದರಿಂದ ಸರ್ಕಾರಕ್ಕೆ ಯಾವುದೇ ರೀತಿ ಧಕ್ಕೆಯಿಲ್ಲ. ಆದರೆ ಕೇಂದ್ರ ಹಾಗೂ ಬಿಹಾರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜೆಡಿಯು ಪಕ್ಷವು ಮಣಿಪುರದಲ್ಲಿ ಬೆಂಬಲ ಹಿಂಪಡೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೇಘಾಲಯದಲ್ಲಿ ಅಧಿಕಾರದಲ್ಲಿರುವ ಕೊನ್ರಾಡ್ ಸಂಗ್ಮಾ ಅವರ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿಯು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆದ ತಿಂಗಳ ಅವಧಿಯಲ್ಲೇ ಜೆಡಿಯು ಕೂಡಾ ಅದೇ ಹಾದಿ ತುಳಿದಿದೆ.
2022ರ ಚುನಾವಣೆಯಲ್ಲಿ ಜೆಡಿಯು 6 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಚುನಾವಣೆ ನಡೆದು ತಿಂಗಳ ಒಳಗಾಗಿ ಐವರು ಶಾಸಕರು ಬಿಜೆಪಿ ಸೇರಿದರು. 60 ಸದಸ್ಯಬಲದ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿಯು 37 ಸದಸ್ಯರ ಬೆಂಬಲ ಪಡೆದು ಸರ್ಕಾರ ರಚಿಸಿದೆ. ನಾಗಾ ಪೀಪಲ್ಸ್ ಫ್ರಂಟ್ ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲವೂ ಇದೆ.
ಹೀಗಾಗಿ ಜೆಡಿಯು ಪಕ್ಷದಿಂದ ಉಳಿದಿದ್ದ ಏಕೈಕ ಶಾಸಕ ಇದೀಗ ಸರ್ಕಾರದಿಂದ ಹೊರಬಂದಿದ್ದಾರೆ. ಆದರೆ, ಜೆಡಿಯು ತೊರೆದು ಬಿಜೆಪಿ ಸೇರಿದ್ದ ಐವರು ಶಾಸಕರ ವಿರುದ್ಧದ ಪಕ್ಷಾಂತರ ಕಾಯ್ದೆ ಪ್ರಕರಣವು ವಿಧಾನಸಭಾಧ್ಯಕ್ಷರ ನ್ಯಾಯಮಂಡಳಿಯಲ್ಲಿ ವಿಚಾರಣೆಗೆ ಬಾಕಿ ಇದೆ. ಆದರೆ ಎನ್‌ಡಿಎಗೆ ಜೆಡಿಯು ಬೆಂಬಲ ನೀಡುತ್ತಿದ್ದಂತೆ ತಮ್ಮ ದೂರನ್ನು ಪಕ್ಷ ಹಿಂಪಡೆದಿತ್ತು. ಜತೆಗೆ ರಾಜ್ಯಪಾಲ, ಮುಖ್ಯಮಂತ್ರಿ ಹಾಗೂ ಸ್ಪೀಕರ್‌ಗೆ ಈ ಕುರಿತು ಪತ್ರವನ್ನೂ ಬರೆದಿತ್ತು.
ಕಳೆದ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಜೆಡಿಯು ಶಾಸಕನಿಗೆ ವಿರೋಧ ಪಕ್ಷ ಕೂರುವ ಜಾಗದಲ್ಲಿ ಆಸನ ಮೀಸಲಿಡಲಾಗಿತ್ತು. ಹೀಗಾಗಿ ಮಣಿಪುರದಲ್ಲಿ ಉಳಿದಿರುವ ಜೆಡಿಯು ಏಕೈಕ ಶಾಸಕ ಮೊಹಮ್ಮದ್ ಅಬ್ದುಲ್ ನಾಸಿರ್ ಅವರನ್ನು ವಿರೋಧ ಪಕ್ಷದ ಸದಸ್ಯ ಎಂದು ಪರಿಗಣಿಸಬೇಕು ಎಂದು ಪಕ್ಷ ತನ್ನ ಪತ್ರದಲ್ಲಿ ಹೇಳಿದೆ.
ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಕಳೆದ ಲೋಕಸಭಾ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗಳಿಸಿತ್ತು. ಬಹುಮತ ಸಿಗದ ಬಿಜೆಪಿಗೆ ಬೆಂಬಲ ನೀಡಿದ್ದ ಜೆಡಿಯು, ನಂತರ ಬಿಹಾರ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಿತು.




