ನವದೆಹಲಿ: 'ಬೇಟಿ ಬಚಾವೋ ಬೇಟಿ ಪಡಾವೋ' ಕಾರ್ಯಕ್ರಮವು ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ಜತೆಗೆ ಗೌರವವನ್ನು ಒದಗಿಸುವ ಮೂಲಕ ಹೊಸ ಆಯಾಮವನ್ನೇ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಶ್ಲಾಘಿಸಿದ್ದಾರೆ.
'ಬೇಟಿ ಬಚಾವೋ ಬೇಟಿ ಪಡಾವೋ' ಪ್ರಾರಂಭವಾಗಿ 10 ವರ್ಷ ಪೂರೈಸಿದ ಹಿನ್ನೆಲೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಮಿತ್ ಶಾ, ಕುಸಿಯುತ್ತಿದ್ದ ಹೆಣ್ಣು ಮಕ್ಕಳ ಲಿಂಗಾನುಪಾತ ಸೇರಿದಂತೆ ಮಹಿಳಾ ಸಬಲೀಕರಣಕ್ಕೆ ತೊಡಕಾಗಿದ್ದ ಹಲವು ಸಮಸ್ಯೆಗಳ ಪರಿಹಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅನುಕೂಲವಾಯಿತು ಎಂದು ತಿಳಿಸಿದ್ದಾರೆ.
ಬೇಟಿ ಬಚಾವೋ ಬೇಟಿ ಪಡಾವೋ' ಕಾರ್ಯಕ್ರಮವು ಇಂದು ಸಾಮೂಹಿಕ ಆಂದೋಲನವಾಗಿ ಮಾರ್ಪಟ್ಟಿದೆ ಎಂದು ಶಾ ಸಂತಸ ವ್ಯಕ್ತಪಡಿಸಿದ್ದಾರೆ.
'ಇಂದು ಶಾಲೆಗಳಲ್ಲಿ ಹೆಣ್ಣು ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಲಿಂಗಾನುಪಾತದಲ್ಲಿ ಅಭೂತಪೂರ್ವ ಸುಧಾರಣೆಯಾಗಿದೆ. ಹೆಣ್ಣುಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಮುಖ ಪಾತ್ರವಹಿಸುವ ಮೂಲಕ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸುತ್ತಿದ್ದಾರೆ" ಎಂದು ಶಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.




