ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಬುಧವಾರ ಪ್ರಸಾದ್ ನೇತ್ರಾಲಯ ಮಂಗಳೂರು, ಬೆಂಗಳೂರಿನ ಒನ್‍ಸೈಟ್ ಎಸ್ಸಿಲೋರ್ ಲುಕ್ಷೋಟಿಕಾ ಫೌಂಡೇಶನ್ ಮತ್ತು ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಿ.15 ರಂದು ನಡೆದ ಉಚಿತ ನೇತ್ರತಪಾಸಣಾ ಶಿಬಿರದ 200 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಸಹಯೋಗ ನೀಡಿದ ಸಂಸ್ಥೆಗಳ ಅವಿಶ್ರಾಂತ ಸೇವೆಯನ್ನು ಶ್ಲಾಘಿಸಿ ನಮ್ಮ ಸನಾತನ ಸಂಸ್ಕಾರದ ಸೇವೆ ಪ್ರತಿಯೊಬ್ಬರ ಜೀವನದ ಉಸಿರಾಗಬೇಕು ಎಂದು ಕರೆ ನೀಡಿದರು. ಪ್ರಸಾದ್ ನೇತ್ರಾಲಯದ ಡಾ. ಕೃಷ್ಣಪ್ರಸಾದ್ ಶಕ್ತಿ ಮತ್ತು ಚೇತನ ತುಂಬಿಕೊಳ್ಳುವ ಈ ಮಠದಲ್ಲಿ ಜನರಿಗೋಸ್ಕರ ನಾವು ಅಳಿಲು ಸೇವೆ ಮಾಡುತ್ತಿದ್ದೇವೆ ಎಂದು ವಿನೀತರಾಗಿ ನುಡಿದರು.
ಒನ್‍ಸೈಟ್‍ನ ಮುಖ್ಯ ವ್ಯವಸ್ಥಾಪಕ ಧರ್ಮಪ್ರಸಾದ್ ರೈ ಮಾತನಾಡಿ, ಮಹಾಕುಂಭಮೇಳದ ನೇತ್ರಕುಂಭವನ್ನು ಉದಾಹರಿಸಿ ಸೇವೆ ಮಾಡುವುದು ನಮ್ಮ ಮನಸ್ಥಿತಿ ಆಗಲಿ ಎಂದರು. ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಮಲಾರ್ ಜಯರಾಮ್ ರೈ, ಆಶ್ರಮದ ಹಿರಿಯ ಕಾರ್ಯಕರ್ತ ಮೋಹನದಾಸ್ ಕೊಂಡೆವೂರು ಮತ್ತು ಸದಸ್ಯ ಶಿವರಾಮ್ ಪಕಳ ಉಪಸ್ಥಿತರಿದ್ದರು. ಶ್ರೀ ಮಠದ "ಆರೋಗ್ಯ ಯೋಜನೆ"ಯ ಈ ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಕನ್ನಡಕವನ್ನು ಪೂಜ್ಯರ ಉಪಸ್ಥಿತಿಯಲ್ಲಿ ಡಾ. ಕೃಷ್ಣಪ್ರಸಾದ್ ಮತ್ತು ಧರ್ಮಪ್ರಸಾದ್‍ರವರು ವಿತರಿಸಿದರು. ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿನಿಯರಾದ ಸಂವೃತ, ಪ್ರಾರ್ಥನ ಮತ್ತು ಕೀರ್ತನ ರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ದಿನಕರ್ ಹೊಸಂಗಡಿ ಸ್ವಾಗತಿಸಿ, ಸದಾಶಿವ ಮೋಂತಿಮಾರ್ ನಿರೂಪಿಸಿ, ವಂದಿಸಿದರು.

.jpeg)
