ಕಾಸರಗೋಡು : ಬಿಜೆಪಿ ಕಾಸರಗೋಡು ಜಿಲ್ಲಾ ಅದ್ಯಕ್ಷ ಸ್ಥಾನಕ್ಕೆ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆ, ಅಶ್ವಿನಿ ಎಂ.ಎಲ್ ಅವರನ್ನು ಆಯ್ಕೆ ಮಾಡಲಾಗಿದ್ದು, ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. ಕಾಸರಗೋಡಿನ ಬಿಜೆಪಿ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆ ಆಯ್ಕೆಯಾಗಿದ್ದು, ಕಚೇರಿ ಮಿನಿಟ್ ಪುಸ್ತಕದಲ್ಲಿ ಸಹಿ ಮಾಡುವ ಮೂಲಕ ಜಿಲ್ಲಾಧ್ಯಕ್ಷ ಸ್ಥಾನಾರೋಹಣ ನಡೆಸಿದರು.
ಪಕ್ಷದ ಆಂತರಿಕ ಸಂಘಟನಾ ಚುನಾವಣಾಧಿಕಾರಿ, ಜಿಲ್ಲಾ ಉಸ್ತುವಾರಿ, ವಕೀಲ ಸುರೇಶ್ ಅವರ ಉಪಸ್ಥಿತಿಯಲ್ಲಿ ಹಾಲಿ ಅಧ್ಯಕ್ಷ ರವೀಶ್ ತಂತ್ರಿ ಕುಂಟಾರು ಅವರು ನಿಯೋಜಿತ ಅಧ್ಯಕ್ಷೆ ಎಂ.ಎಲ್ ಅಶ್ವಿನಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪಕ್ಷದ ರಾಜ್ಯ ವಕ್ತಾರ ನಾರಾಯಣನ್ ನಂಬೂದಿರಿ ಸಮಾರಂಭ ಉದ್ಘಾಟಿಸಿದರು. ಬಿಜೆಪಿ ದ. ಕ ಜಿಲ್ಲಾ ಸಮಿತಿ ಅಧ್ಯಕ್ಷ ಸತೀಶ್ ಕುಂಪಲ, ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಶ್ರೀಕಾಂತ್, ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಮಾಜಿ ಜಿಲ್ಲಾಧ್ಯಕ್ಷ ಕರುಣಾಕರನ್ ಮಾಸ್ಟರ್, ಸತೀಶ್ಚಂದ್ರ ಭಂಡಾರಿ, ವಿಜಯ್ ರೈ, ಸವಿತಾ ಟೀಚರ್, ಶಿವಸುಬ್ರಹ್ಮಣ್ಯ ಭಟ್, ಅಶೊಕ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ಎ. ವೇಲಾಯುಧನ್ ಸ್ವಾಗತಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆಯಾಗಿ ಆಯ್ಕೆಯಾದ ಯುವ ನಾಯಕಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಶಿಕ್ಷಕಿ ವೃತ್ತಿಯಿಂದ ರಾಜಕೀಯಕ್ಕೆ:
ಮೂಲತ: ಬೆಂಗಳೂರು ಮದನ ನಾಯಕನ ಹಳ್ಳಿ ನಿವಾಸಿಯಾಗಿರುವ ಎಂ.ಎಲ್ ಅಶ್ವಿನಿ ಅವರು ವರ್ಕಾಡಿ ಕೊಡ್ಲಮೊಗರು ನಿವಾಸಿ ತಿರುವನಂತಪುರದ ಮಿಮ್ಸ್ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಫ್ಯಾಕಲ್ಟಿ ಅಧಿಕಾರಿಯಾಗಿರುವ ಶಶಿಧರ್ ಅವರನ್ನು ವಿವಾಹಿತರಾಗಿ ವರ್ಕಾಡಿಯಲ್ಲಿ ವಾಸಿಸುತ್ತಿದ್ದಾರೆ. ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ದುಡಿಯುತ್ತಿದ್ದ ಇವರು, 2021ರಲ್ಲಿ ಸಕ್ರಿಯ ರಾಜಕೀಯಕ್ಕಿಳಿದಿದ್ದರು.ಮಂಜೇಶ್ವರ ಬ್ಲಾಕ್ ಪಂಚಾಯಿತಿ ಕಡಂಬಾರ್ ಬ್ಲಾಕ್‍ನಿಂದ ಆಯ್ಕೆಯಾಗಿ ಬಂದಿದ್ದ ಇವರು, ಕಳೆದಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಓಟ್ ಬ್ಯಾಂಕ್ ಹೆಚ್ಚಿಸಿಕೊಂಡಿದ್ದರು.
ಮಹಿಳಾ ಮೋರ್ಛಾ ರಾಷ್ಟ್ರೀಯ ಸಮಿತಿ ಸದಸ್ಯೆಯಾಗಿರುವ ಎಂ.ಎಲ್ ಅಶ್ವಿನಿ ಅವರು, ಕುಂಬಳೆ ಪಂಚಾಯಿತಿ ಪ್ರಭಾರಿಯಾಗಿದ್ದಾರೆ. ಪಕ್ಷದ ಕೇಂದ್ರೀಯ ನಾಯಕರ ಜತೆ ಉತ್ತಮ ಸಂಘಟನಾ ಬಾಂಧವ್ಯ ಹೊಂದಿದ್ದಾರೆ.
(ಚಿತ್ರ ಮಾಹಿತಿ:1): ಕಚೇರಿ ಮಿನಿಟ್ ಪುಸ್ತಕದಲ್ಲಿ ಸಹಿ ಮಾಡುವ ಮೂಲಕ ಎಂ.ಎಲ್ ಅಶ್ವಿನಿ ಅವರು ಜಿಲ್ಲಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡರು.
2)ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆಯಾಗಿ ಅಯ್ಕೆಯಾದ ಎಂ.ಎಲ್ ಅಶ್ವಿನಿ ಅವರನ್ನು ನಿರ್ಗಮಿತಿ ಅದ್ಯಕ್ಷ ರವೀಶ ತಂತ್ರಿ ಕುಂಟರು ಅಭಿನಂದಿಸಿದರು.)




