ಕಾಸರಗೋಡು: ಜಿಲ್ಲೆಯ ಕಾರಡ್ಕ, ಮುಳಿಯಾರ್, ಬೇಡಡ್ಕ ಪಂಚಾಯಿತಿ ವ್ಯಾಪ್ತಿಯ ಮಲೆನಾಡು ಪ್ರದೇಶದ ಚಿರತೆ ಭೀತಿ ದೂರಾಗಿಸುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಚಿರತೆ ಭೀತಿಯಿಂದ ಪೆÇೀಷಕರು ಭಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆಯ ಸೂಕ್ತ ಮಧ್ಯಸ್ಥಿಕೆ ಅಗತ್ಯ ಎಂದು ತಿಳಿಸಿದರು. ಚಿರತೆಯನ್ನು ಸೆರೆ ಹಿಡಿದು ದೂರದ ಕಾಡಿಗೆ ಸ್ಥಳಾಂತರಿಸಬೇಕು, ಈ ಬಗ್ಗೆ ಅರಣ್ಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಾರ್ವಜನಿಕರ ಭಯ ಹೋಗಲಾಡಿಸಬೇಕು. ವಯನಾಡಿನಲ್ಲಿ ಮಹಿಳೆಯನ್ನು ಚಿರತೆ ಕೊಂದು ತಿಂದಂತಹ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಆರ್‍ಆರ್‍ಟಿ ತಂಡ ಸಕ್ರಿಯವಾಗಿರಬೇಕು. ಚಿರತೆ ಸಂಚಾರದ ಸಮಸ್ಯೆ ಇರುವ ಪ್ರದೇಶದ ನಾಲ್ಕು ಶಾಲಾ ವ್ಯಾಪ್ತಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಅರಣ್ಯ ಇಲಾಖೆಯ ವಿಶೇಷ ಗಸ್ತು ನಡೆಸಬೇಕು, ಬೇಡಡ್ಕ, ಬೋವಿಕ್ಕಾಣ ವ್ಯಾಪ್ತಿಯಲ್ಲಿ ಚಿರತೆ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಕ್ಯಾಮೆರಾ ಅಳವಡಿಸುವಂತೆಯೂ ಶಾಸಕರು ಆಗ್ರಹಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮಾತನಾಡಿ, ಕುಂಬಳೆ ಪಂಚಾಯಿತಿ ವ್ಯಾಪ್ತಿಯ ಕೋಡಿಯಮ್ಮ, ಆರಿಕ್ಕಾಡಿ, ಬಂಬ್ರಾಣ ಭಾಗದಲ್ಲಿ ಕಾಡುಹಂದಿ ಉಪಟಳ ಹೆಚ್ಚಾಗಿದ್ದು, ಕಾಡುಹಂದಿಗಳ ಸಂಚಾರದಿಂದ ಅಪಘಾತ, ಹಾನಿ ಸಂಭವಿಸುತ್ತಿದೆ. ಕುಂಬಳೆಯನ್ನು ಕಾಡುಹಂದಿಗಳ ಉಪಟಳವಿರುವ ಪಂಚಾಯಿತಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಎಡಿಎಂ. ಪಿ. ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರನ್ನು ಸನ್ಮಾನಿಸಲಾಯಿತು. ಶಾಸಕರಾದ ಎಂ. ರಾಜಗೋಪಾಲನ್, ಇ. ಚಂದ್ರಶೇಖರನ್, ಸಿ.ಎಚ್.ಕುಞಂಬು, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್, ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೇಗಂ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.





