ಜೈಪುರ: ರಾಜಸ್ಥಾನದ ಅಜ್ಮೈರ್ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ವರ ಕುದುರೆ ಏರಿ ದಿಬ್ಬಣದೊಂದಿಗೆ ವಿವಾಹ ನಿಗದಿಯಾದ ಸ್ಥಳಕ್ಕೆ ಬರಲು ಸುಮಾರು 200 ಪೊಲೀಸರು ಭದ್ರತೆ ಒದಗಿಸಿದ್ದಾರೆ.
ವಿವಾಹ ಕಾರ್ಯಕ್ರಮಕ್ಕೂ ಮುನ್ನ ವರ ಕುದುರೆ ಏರಿ ಮೆರವಣಿಗೆ ನಡೆಸುವ 'ಬಿಂದೋಲಿ' ಪದ್ಧತಿ ರಾಜಸ್ಥಾನದಲ್ಲಿ ಆಚರಣೆಯಲ್ಲಿದೆ.
ಈ ಪ್ರಕಾರ ವರ ವಿಜಯ್ ರೆಗಾರ್ ಅವರು ವಧು ಅರುಣಾ ಖೊರ್ವಾಲ್ ಅವರ ಲವೆರಾ ಗ್ರಾಮಕ್ಕೆ ಕುದುರೆ ಏರಿ ಮೆರವಣಿಗೆ ಮೂಲಕ ಮಂಗಳವಾರ ಬರಬೇಕಿತ್ತು. ಕುದುರೆ ಸವಾರಿಗೆ ಗ್ರಾಮದ ಮೇಲ್ಜಾತಿ ಜನರು ವಿರೋಧ ವ್ಯಕ್ತಪಡಿಸಬಹುದು ಎಂದು ವಧುವಿನ ಕುಟುಂಬಸ್ಥರು ಮೊದಲೇ ದೂರು ನೀಡಿದ್ದರು. ಹೀಗಾಗಿ ವಿವಾಹ ಕಾರ್ಯಕ್ರಮ ಸುಗಮವಾಗಿ ನಡೆಯಲು ಪೊಲೀಸರು ಬಿಗಿ ಭದ್ರತೆ ಒದಗಿಸಿದರು.
'ಈ ಹಿಂದೆ ವಿವಾಹ ಸಂದರ್ಭದಲ್ಲಿ ಮೆರವಣಿಗೆ ನಡೆದಾಗ ಅನಪೇಕ್ಷಣೀಯ ಘಟನೆಗಳು ನಡೆದಿದ್ದವು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಮತ್ತು ಸಾಮಾಜಿಕ ಹೋರಾಟಗಾರರ ನೆರವು ಕೋರಿದ್ದೆವು' ಎಂದು ವಧುವಿನ ತಂದೆ ನಾರಾಯಣ ತಿಳಿಸಿದರು.




