ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯ ಯಶಸ್ವಿಗಾಗಿ ಕೊಲ್ಯ ಪ್ರಾದೇಶಿಕ ಸಮಿತಿ ರಚನಾ ಸಭೆ ಕೊಲ್ಯ ಶಿವಾಜಿ ಕಲಾ ಸಂಘದಲ್ಲಿ ಜರುಗಿತು.
ಬ್ರಹ್ಮ ಕಲಶೋತ್ಸವದ ಮಧೂರು ಪಂಚಾಯತಿ ಸಮಿತಿ ಅಧ್ಯಕ್ಷರಾದ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ಅವರು ಬ್ರಹ್ಮಕಲಶೋತ್ಸವ ಸಮಾರಂಭದ ಬಗ್ಗೆ ಮಾಹಿತಿ ನೀಡಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಾರಾಯಣಯ್ಯ ಅವರು, ಸೀಮೆ ದೇಗುಲದಲ್ಲಿ ನಡೆಯುವ ಮಹತ್ಕಾರ್ಯಕ್ಕೆ ಎಲ್ಲ ಜನರ ಸಹಕಾರ ಯಾಚಿಸಿ, ವಿಜ್ಞಾಪನಾ ಪತ್ರವನ್ನು ಎಲ್ಲ ಹಿಂದು ಮನೆಗಳಿಗೆ ವಿತರಿಸಲು ಸೂಚಿಸಿದರು. ಪ್ರಾದೇಶಿಕ ಸಮಿತಿ ಅಧ್ಯಕ್ಷರಾಗಿ ಎಸ್ ಎನ್. ಮಯ್ಯ ಕೊಲ್ಯ ಹಾಗೂ ಸಂಚಾಲಕರಾಗಿ ಗೋಪಾಲ್ ನಾಯ್ಕ್ ಕೊಲ್ಯ ಅವರನ್ನು ಆಯ್ಕೆ ಮಾಡಲಾಯಿತು. ಬ್ರಹ್ಮಕಕಲಶೋತ್ಸವದ 12 ದಿವಸಗಳ ಕಾಲಾವಧಿಯಲ್ಲಿ ಪೂರ್ಣಕಾಲದ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವ ಭಕ್ತಾದಿಗಳು ಗೂಗಲ್ ಅರ್ಜಿಗಳಲ್ಲಿ ತಮ್ಮ ವಿವರಗಳನ್ನು ಭರ್ತಿಗೊಳಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿಸಿದರು. ಶಿವಾಜಿ ಕಲಾಸಂಘದ ಅಧ್ಯಕ್ಷ ಅವಿನಾಶ್ ಕೊಲ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಮಧೂರು ಕ್ಷೇತ್ರದಲ್ಲಿ ಮಾ. 27ರಿಂದ ಏ. 7ರ ವರೆಗೆ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ನಡೆಯುವುದು.





