ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ ಪರಿಶೀಲನೆಗೆ ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿಯು (JPC) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸದಸ್ಯರು ಮಂಡಿಸಿದ ಎಲ್ಲಾ ತಿದ್ದುಪಡಿಗಳನ್ನು ಅಂಗೀಕರಿಸಿದೆ. ವಿರೋಧ ಪಕ್ಷಗಳ ಸದಸ್ಯರು ಪ್ರಸ್ತಾಪಿಸಿದ ಎಲ್ಲಾ ತಿದ್ದುಪಡಿಗಳನ್ನು ತಿರಸ್ಕರಿಸಿದೆ.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್, 'ಸಮಿತಿ ಅಂಗೀಕರಿಸಿದ ಬದಲಾವಣೆಗಳಿಂದಾಗಿ ಕಾನೂನು ಈ ಹಿಂದಿಗಿಂತ ಉತ್ತಮ ಹಾಗೂ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಹೇಳಿದ್ದಾರೆ.
ಸಭೆಯ ನಡಾವಳಿಗಳ ಬಗ್ಗೆ ಟೀಕಿಸಿರುವ ವಿರೋಧ ಪಕ್ಷಗಳ ಸದಸ್ಯರು, ಜಗದಂಬಿಕಾ ಪಾಲ್ ಪ್ರಜಾತಾಂತ್ರಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
'ಇದೊಂದು ಹಾಸ್ಯಸ್ಪದ ಪ್ರಕ್ರಿಯೆ. ನಮ್ಮ ಅಭಿಪ್ರಾಯಗಳನ್ನು ಕೇಳಿಲ್ಲ. ಜಗದಂಬಿಕಾ ಪಾಲ್ ಅವರು ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ' ಎಂದು ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ.
ಬ್ಯಾನರ್ಜಿ ಆರೋಪವನ್ನು ನಿರಾಕರಿಸಿದ ಪಾಲ್, 'ಇಡೀ ಪ್ರಕ್ರಿಯೆ ಪ್ರಜಾಸತಾತ್ಮಕವಾಗಿತ್ತು. ಬಹುಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಯಿತು. ಮಸೂದೆಯ 14ನೇ ಪರಿಚ್ಛೇದಲ್ಲಿ ಎನ್‌ಡಿಎ ಸದಸ್ಯರು ಸೂಚಿಸಿದ ತಿದ್ದುಪಡಿಗಳನ್ನು ಅಂಗೀಕರಿಸಲಾಗಿದೆ' ಎಂದಿದ್ದಾರೆ.
ಪರಿಚ್ಛೇದ 44ರಲ್ಲಿ 100ಕ್ಕೂ ಅಧಿಕ ತಿದ್ದುಪಡಿಗಳನ್ನು ವಿರೋಧ ಪಕ್ಷದ ಸದಸ್ಯರು ಮಂಡಿಸಿದರು. ಅವುಗಳನ್ನು ಮತಕ್ಕೆ ಹಾಕುವ ಮೂಲಕ ಸೋಲಿಸಲಾಯಿತು ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.




