ನವದೆಹಲಿ: ಕ್ರೈಸ್ತ ಪಾದ್ರಿಯೊಬ್ಬರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಎಲ್ಲಿ ನಡೆಯಬೇಕು ಎಂಬ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಭಿನ್ನಮತದ ತೀರ್ಪು ನೀಡಿದೆ. ಆದರೆ, ಅಂತ್ಯಸಂಸ್ಕಾರವು ಕ್ರೈಸ್ತರಿಗೆ ಮೀಸಲಾಗಿರುವ ಸ್ಥಳದಲ್ಲಿ ನಡೆಯಬೇಕು ಎಂದು ಹೇಳಿದೆ.
ಕ್ರೈಸ್ತ ಪಾದ್ರಿಯ ಅಂತಿಮ ಸಂಸ್ಕಾರವು ಅವರ ಕುಟುಂಬಕ್ಕೆ ಸೇರಿದ ಖಾಸಗಿ ಸ್ಥಳದಲ್ಲಿ ನಡೆಯಬೇಕು ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೇಳಿದ್ದಾರೆ.
ಅಂತಿಮ ಸಂಸ್ಕಾರವು ಕ್ರೈಸ್ತರಿಗೆ ಮೀಸಲಾಗಿರುವ ಸ್ಥಳದಲ್ಲಿಯೇ ನಡೆಯಬೇಕು ಎಂದು ನ್ಯಾಯಮೂರ್ತಿ ಎಸ್.ಸಿ. ಶರ್ಮ ಹೇಳಿದ್ದಾರೆ.
ಅಂತ್ಯ ಸಂಸ್ಕಾರವನ್ನು ಎಲ್ಲಿ ನಡೆಸಬೇಕು ಎಂಬುದು ವಿವಾದಕ್ಕೆ ತುತ್ತಾಗಿರುವುದರಿಂದ ಪಾದ್ರಿಯ ಮೃತದೇಹವು ಜನವರಿ 7ರಿಂದಲೂ ಶವಾಗಾರದಲ್ಲಿ ಇದೆ ಎಂಬುದನ್ನು ಪರಿಗಣಿಸಿರುವ ವಿಭಾಗೀಯ ಪೀಠವು, ಈ ವಿಷಯವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವುದಿಲ್ಲ ಎಂದು ಹೇಳಿದೆ. ಮೃತ ದೇಹದ ಅಂತ್ಯ ಸಂಸ್ಕಾರವವನ್ನು ಪಾದ್ರಿಯ ಊರಾಗಿರುವ ಛಿಂದವಾಡದಿಂದ 20 ಕಿ.ಮೀ. ದೂರದಲ್ಲಿರುವ, ಕ್ರೈಸ್ತರ ಅಂತ್ಯಸಂಸ್ಕಾರಕ್ಕೆ ಮೀಸಲಾಗಿರುವ ಸ್ಥಳದಲ್ಲಿ ನಡೆಸಬೇಕು ಎಂದು ಸೂಚಿಸಿದೆ.
ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಛತ್ತೀಸಗಢ ರಾಜ್ಯ ಸರ್ಕಾರವು ಅಗತ್ಯ ಭದ್ರತೆ ಕಲ್ಪಿಸಬೇಕು ಎಂದು ಹೇಳಿದೆ.
ಗ್ರಾಮದ ಸ್ಮಶಾನದಲ್ಲಿ ಕ್ರೈಸ್ತರಿಗೆ ನಿಗದಿ ಮಾಡಿರುವ ಸ್ಥಳದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ಕೊಡಬೇಕು ಎಂದು ಕೋರಿ ಪಾದ್ರಿಯ ಪುತ್ರ ರಮೇಶ್ ಬಘೇಲ್ ಸಲ್ಲಿಸಿದ್ದ ಅರ್ಜಿಯನ್ನು ಛತ್ತೀಸಗಢ ಹೈಕೋರ್ಟ್ ಇತ್ಯರ್ಥಪಡಿಸಿತ್ತು. ಈ ಕ್ರಮ ತೃಪ್ತಿ ತಂದಿಲ್ಲ ಎಂದು ಬಘೇಲ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಸ್ಮಶಾನದಲ್ಲಿ ಕ್ರೈಸ್ತರಿಗೆ ನಿಗದಿ ಮಾಡಿರುವ ಸ್ಥಳದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಗ್ರಾಮದ ಕೆಲವರು ಬಿಡುತ್ತಿಲ್ಲ, ತಮ್ಮ ಕುಟುಂಬಕ್ಕೆ ಸೇರಿದ ಖಾಸಗಿ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಸುವುದಕ್ಕೂ ಅವಕಾಶ ಕೊಡುತ್ತಿಲ್ಲ ಎಂದು ಬಘೇಲ್ ದೂರಿದ್ದರು.




