ಕಾಸರಗೋಡು: ವನ್ಯಮೃಗಗಳ ದಾಳಿಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 20ಮಂದಿ ಜೀವ ಕಳೆದುಕೊಂಡಿದ್ದು, 390ಮಂದಿ ಗಾಯಗೊಂಡಿರುವುದಾಗಿ ಕೇರಳ ರಾಜ್ಯ ಅರಣ್ಯ ಖಾತೆ ಸಚಿವ ಎ.ಕೆ ಶಶೀಂದ್ರನ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದ ಅರಣ್ಯ ವ್ಯಾಪ್ತಿಯಲ್ಲಿ ಮೂರು ಮಂದಿ, ಉದುಮ, ತೃಕ್ಕರಿಪುರ ಹಾಗೂ ಮಂಜೇಶ್ವರದಲ್ಲಿ ತಲಾ 4, ಹೊಸದುರ್ಗದಲ್ಲಿ 5 ಮಂದಿ ಬಲಿಯಾದವರು. ಇನ್ನು ಕಾಸರಗೋಡು ವಿಧಾನಸಭಾ ವ್ಯಾಪ್ತಿಯಲ್ಲಿ 42ಮಂದಿ, ಉದುಮ ಹಾಗೂ ಮಂಜೇಶ್ವರದಲ್ಲಿ ತಲಾ 56ಮಂದಿ, ಹೊಸದುರ್ಗದಲ್ಲಿ 98ಮಂದಿ ಹಾಗೂ ತೃಕ್ಕರಿಪುರದಲ್ಲಿ 138ಮಂದಿ ವನ್ಯಜೀವಿಗಳ ದಾಳಿಯಿಂದ ಗಾಯಗೊಂಡಿದ್ದಾರೆ. ವನ್ಯಜೀವಿಗಳ ದಾಳಿಯಿಂದ ಸಾವನ್ನಪ್ಪಿದವರು ಹಾಗೂ ಗಾಯಗೊಂಡವರ ಬಗ್ಗೆ ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಕೇಳಿದ ಮಾಹಿತಿಯೊಂದಿಗಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ವನ್ಯಜೀವಿಗಳ ದಾಳಿಯಿಂದ ಪ್ರಾಣ ಕಳೆದುಕೊಂಡವರ ಆಶ್ರಿತರಿಗೆ ಕಳೆದ ನಾಲ್ಕು ವರ್ಷಗಳಲ್ಲಿ 80ಲಕ್ಷ ರೂ. ನಷ್ಟ ಪರಿಹಾರ ಒದಗಿಸಲಾಘಿದೆ. ಕಾಸರಗೋಡು, ಉದುಮ ಹಾಗೂ ತೃಕ್ಕರಿಪುರ ಕ್ಷೇತ್ರದಲ್ಲಿ ತಲಾ 14ಲಕ್ಷ, ಮಂಜೇಶ್ವರದಲ್ಲಿ 12ಲಕ್ಷ, ಹೊಸದುರ್ಗದಲ್ಲಿ 26ಲಕ್ಷ ರೂ. ಪರಿಹಾರ ನೀಡಲಾಗಿದೆ. ವನ್ಯಜೀವಿಗಳ ದಾಳಿಯಿಂದ ಗಾಯಗೊಂಡವರಿಗೆ ಕಾಸರಗೋಡು ಕ್ಷೇತ್ರದಲ್ಲಿ 9.06ಲಕ್ಷ, ಮಂಜೇಶ್ವರದಲ್ಲಿ 11.74ಲಕ್ಷ, ಉದುಮದಲ್ಲಿ 11.46ಲಕ್ಷ, ಹೊಸದುರ್ಗದಲ್ಲಿ 19.97ಲಕ್ಷ, ತೃಕ್ಕರಿಪುರ ಕ್ಷೇತ್ರದಲ್ಲಿ 30.38ಲಕ್ಷ ರೂ. ಸೇರಿದಂತೆ ಒಟ್ಟು 83.06ಲಕ್ಷ ರೂ. ವಿತರಿಸಲಾಗಿದೆ. ಇನ್ನು ವನ್ಯಜೀವಿ ಉಪಟಳದಿಂದ ಕೃಷಿನಾಶ ಹೊಂದಿದ ಕೃಷಿಕರಿಗೂ ನಷ್ ಪರಿಹಾರ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.






