ಕಾಸರಗೋಡು: ಚೀಮೇನಿಯ ನಿಡುಂಬದಲ್ಲಿ ಮನೆ ಬಗಿಲು ಒಡೆದ 40ಪವನು ಚಿನ್ನಾಭರಣ ಹಾಗೂ ನಾಲ್ಕು ಕಿಲೋ ಬೆಳ್ಳಿ ಸಾಮಗ್ರಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮನೆಕೆಲಸಕ್ಕಿದ್ದ ನೇಪಾಳಿ ದಂಪತಿಯನ್ನು ಕೇಂದ್ರೀಕರಿಸಿ ತನಿಖೆ ಮುಂದುವರಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆಯನ್ನು ನೇಪಾಳಕ್ಕೆ ವಿಸ್ತರಿಸಲಾಗಿದೆ. ಮನೆಯ ಸಿಸಿ ಕ್ಯಾಮರಾ ದೃಶ್ಯಾವಳಿ ಪ್ರಕಾರ ನಾಲ್ಕು ಮಂದಿ ಕಳವಿನಲ್ಲಿ ಶಾಮೀಲಾಗಿದ್ದು, ಇಬ್ಬರು ಮನೆ ಹೊರಗೆ ಕಾವಲು ನಿಂತು, ಇನ್ನಿಬ್ಬರು ಮನೆಯೊಳಗೆ ಧಾವಿಸುತ್ತಿರುವುದು ದಾಖಲಾಗಿದೆ.
ಕಣ್ಣೂರು ನಿವಾಸಿ ಹಾಗೂ ಇಂಜಿನಿಯರ್ ಆಗಿರುವ ಎನ್. ಮುಖೇಶ್ ಅವರ ಚೀಮೇನಿ ಚಂಬ್ರಕಾನದ ಮನೆಯಿಂದ ಈ ಕಳವು ನಡೆದಿದೆ. ಮನೆಯ ಜಾನುವಾರುಗಳ ಪಾಲನೆಗಾಗಿ ನೇಪಾಳ ನಿವಾಸಿ ಚಕ್ರಶಾಹಿ ಹಾಗೂ ಈತನ ಪತ್ನಿ ಇಷಾ ಚೌಧುರಿಯನ್ನು ಕೆಲಸಕ್ಕಿರಿಸಿಕೊಳ್ಳಲಾಗಿತ್ತು. ಮುಕೇಶ್ ಹಾಗೂ ಅವರ ಕುಟುಂಬ ಸೋಮವಾರ ಮನೆಗೆ ಆಗಮಿಸಿದಾಗ ಕಳವು ಬೆಳಕಿಗೆ ಬಂದಿದ್ದು, ನೇಪಾಳಿ ದಂಪತಿ ನಾಪತ್ತೆಯಾಗಿದ್ದರು. ಈ ಬಗ್ಗೆ ಚೀಮೇನಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆರೋಪಿಗಳು ಕಳವಿನ ನಂತರ ಆಟೋರಿಕ್ಷಾದಲ್ಲಿ ಕನ್ನಾಡಿಪಾರೆಯಾಗಿ, ನೀಲೇಶ್ವರ ತೆರಳಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ಇವರು ಸಂಚರಿಸಿಲ್ಲ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ದಂಪತಿ ಬಗ್ಗೆ ನೇಪಾಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಗಳಿನ್ನೂ ಕೇರಳದಲ್ಲೇ ಇರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಡಿವೈಎಸ್‍ಪಿ ಬಾಬು ಪೆರಿಙÉೂೀತ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.




