ಕಾಸರಗೋಡು: ಪೈವಳಿಕೆ ಕಳಾಯಿಯ ಮನೆಯ ಕಪಾಟಿನಲ್ಲಿರಿಸಿದ್ದ ಏಳು ಪವನು ಚಿನ್ನ ಹಾಗೂ ಒಂದು ಲಕ್ಷ ರೂ. ನಗದು ಕಳವುಗೈದಿದ್ದ ಆರೋಪಿ ಮೈಸೂರಿನ ಎಲ್ವಾಲ ನಿವಾಸಿ ಯಶವಂತ ಕುಮಾರ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೈವಳಿಕೆ ಕಳಾಯಿ ನಿವಾಸಿ, ಕೃಷಿಕ ಸಂಜೀವ ಶೆಟ್ಟಿ ಅವರ ಮನೆಯಿಂದ ಈ ಕಳವು ನಡೆದಿದ್ದು, ಕಳವುಗೈದ ಚಿನ್ನದ ಬದಲು ಅದೇ ರೀತಿಯ ನಕಲಿ ಆಭರಣ ಇರಿಸಲಾಗಿತ್ತು. ಮನೆಯಲ್ಲಿ ಸಂಜೀವ ಶೆಟ್ಟಿ ಒಬ್ಬರೇ ಇದ್ದು, ಇವರ ಪುತ್ರ ಅಶೋಕ್ ಕುಮಾರ್ ಉದ್ಯೋಗ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದ ಸಂದರ್ಭ ಕೃತ್ಯವೆಸಗಲಾಗಿತ್ತು. ಯಶವಂತ ಕುಮಾರ್‍ನನ್ನು ಮನೆ ಹಾಗೂ ತೋಟದ ಕೆಲಸಕ್ಕೆ ನೇಮಿಸಲಾಗಿದ್ದು, ಜ. 28ರಂದು ಊರಿಗೆ ತೆರಳುವುದಾಗಿ ತಿಳಿಸಿ ಹೊರಟಿದ್ದನು. ಈ ಮಧ್ಯೆ ಅಶೋಕ್ ಕುಮಾರ್ ಬೆಂಗಳೂರಿನಿಂದ ಮನೆಗೆ ವಾಪಸಾಗಿ ಕಪಾಟು ತೆರೆದು ನೋಡಿದಾಗ ಒಂದು ಲಕ್ಷ ರೂ. ನಗದು ಕಳವಾಗಿರುವುದು ಗಮನಕ್ಕೆ ಬಂದಿದ್ದು, ಅಲ್ಲಿದ್ದ ನಾಲ್ಕು ಬಳೆಗಳ ಬಗ್ಗೆಯೂ ಸಂಶಯದಿಂದ ತಪಾಸಣೆ ನಡೆಸಿದಾಗ ಅದು ನಕಲಿ ಎಂಬುದು ತಿಳಿದು ಬಂದಿತ್ತು. ಅಸಲಿ ಬಳೆಯನ್ನು ತೆಗೆದು, ಅದೇ ರೀತಿಯ ನಕಲಿ ಬಳೆಗಳನ್ನು ಕಪಾಟಿನಲ್ಲಿರಿಸಲಾಗಿತ್ತು. ಈ ಬಗ್ಗೆ ಅಶೋಕ್ ಕುಮಾರ್ ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದಾಗ ಮೈಸೂರಿನಲ್ಲಿರುವ ಬಗ್ಗೆ ಮಾಹಿಒತಿ ಲಭಿಸಿತ್ತು.
ನಗ ಹಾಗೂ ನಗದಿನೊಂದಿಗೆ ಪರಾರಿಯಾಗಿ ಮೈಸೂರಿನಲ್ಲಿ ಆಡಂಬರದ ಜೀವನ ನಡೆಸುತ್ತಿದ್ದ ಯಶವಂತನ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಮಡಿದ್ದರು. ಈತನ ಮೊಬೈಲ್ ತಪಾಸಣೆ ನಡೆಸಿದಾಗ ನ್‍ಲೈನ್ ಮೂಲಕ ರೋಲ್ಡ್‍ಗೋಲ್ಡ್ ಬಳೆ ಖರೀದಿಸಿರುವ ಮಾಹಿತಿ ಲಭ್ಯವಾಘಿತ್ತು. ಅಲ್ಲದೆ ಬ್ಯಾಂಕ್ ಖಾತೆಯಲ್ಲಿ ಹಲವುಬಾರಿ ಹಣ್ ವ್ಯವಹಾರ ನಡೆಸಿರುವುದೂ ಪತ್ತೆಯಾಗಿತ್ತು. ಕಾಸರಗೋಡು ಡಿವೈಎಸ್‍ಪಿ ಸಿ.ಕೆ ಸುನಿಲ್‍ಕುಮಾರ್ ನೇತೃತ್ವದಲ್ಲಿ ಮಂಜೇಶ್ವರ ಠಾಣೆ ಎಸ್.ಐ ರತೀಶ್‍ಗೋಪಿ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.




