ಬದಿಯಡ್ಕ: ಭಜನಾ ಮಂದಿರಗಳು ಸಮಾಜವನ್ನು ಒಂದುಗೂಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಲ್ಲಾ ಸ್ತರದ ಜನರೂ ಯಾವುದೇ ಬೇಧಭಾವವನ್ನು ಕಾಣದೆ ಒಟ್ಟುಸೇರಿ ದೇವರನ್ನು ಭಜಸಿದಾಗ ಅಲ್ಲಿ ಸಕಾರಾತ್ಮಕ ಚಿಂತನೆಗಳು ಬೆಳೆಯುತ್ತವೆ. ಧಾರ್ಮಿಕ ಕ್ಷೇತ್ರಗಳ ಪುನರುದ್ಧಾರಕ್ಕೆ ನಾಡಿನ ಎಲ್ಲಾ ಜನರೂ ದೈಹಿಕ ಮತ್ತು ಆರ್ಥಿಕವಾಗಿ ಕೈಜೋಡಿಸಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಪಜ್ಜ ಕೊಲ್ಲಂಗಾನ ಶ್ರೀ ಅಯ್ಯಪ್ಪ ಭಜನಾ ಮಂದಿರ ಪುನಃನಿರ್ಮಾಣ ಸಮಿತಿಯ ವತಿಯಿಂದ ಭಾನುವಾರ ನಡೆದ ಧಾರ್ಮಿಕ ಸಭೆಯ ಹಾಗೂ ನಿಧಿಸಂಚಯನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡಿದರು.
ಶ್ರೀ ಅಯ್ಯಪ್ಪ ಭಜನಾಮಂದಿರ ಪುನಃನಿರ್ಮಾಣ ಸಮಿತಿ ರಕ್ಷಾಧಿಕಾರಿ ಶ್ರೀನಾಥ್ ಕೊಲ್ಲಂಗಾನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವಾಧ್ಯಕ್ಷ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿ ಅನುಗ್ರಹ ಮಾತುಗಳನ್ನಾಡಿ, ಪ್ರತಿಯೊಬ್ಬ ವ್ಯಕ್ತಿಯ ಆಂತರಂಗಿಕ ನೆಮ್ಮದಿಗೆ ಧಾರ್ಮಿಕ ಕಾರ್ಯಗಳೇ ಪ್ರಮುಖವಾದುದು. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ಜನರು ಒಗ್ಗೂಡುವ ಭಜನಾ ಮಂದಿರದ ಪುನರ್ ನವೀಕರಣಕ್ಕೆ ತೊಡಗಿರುವುದು ಅತ್ಯುತ್ತಮ ವಿಚಾರ. ನೂತನ ಮಂದಿರ ಶೀಘ್ರ ಸಾಕಾರಗೊಳ್ಳಲಿ, ಎಲ್ಲರ ಪಾಲ್ಗೊಳ್ಳುವಿಕೆ ಇರಲಿ ಎಂದು ತಿಳಿಸಿದರು.
ಮಧೂರು ಗ್ರಾಮಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಕೆ., ಜನಪರ ವೈದ್ಯ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ನಿವೃತ್ತ ಪೋಲೀಸ್ ಅಧಿಕಾರಿ ಹರಿಶ್ಚಂದ್ರ ನಾಯ್ಕ್, ಆಡಿಟರ್ ಗೋಪಾಲಕೃಷ್ಣ ಮೇಗಿನಡ್ಕ, ಜನಪ್ರತಿನಿಧಿ ಕೆ.ಶ್ಯಾಮಪ್ರಸಾದ ಮೇಗಿನಡ್ಕ, ನಿವೃತ್ತ ರೈಲ್ವೇ ಅಧಿಕಾರಿ ಐತ್ತಪ್ಪ ನಾಯ್ಕ ಮರ್ಧಂಬೈಲು, ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಪಿ.ವಿ., ಎಡಪ್ಪರಂಬ ಶಾಲಾ ಮುಖ್ಯೋಪಾಧ್ಯಾಯ ಸದಾಶಿವ ಶರ್ಮ ಪಜ್ಜ, ನಿವೃತ್ತ ಕೃಷಿಇಲಾಖೆ ಅಧಿಕಾರಿ ರಮೇಶ್ ನಾಯ್ಕ, ಸ್ಥಳದಾನಗೈದ ಬಾಬು ನಾಯ್ಕ ಪಾಲ್ಗೊಂಡಿದ್ದರು. ಶ್ರೀ ಅಯ್ಯಪ್ಪ ಭಜನಾಮಂದಿರ ಪುನರ್‍ನಿರ್ಮಾಣ ಸಮಿತಿ ಅಧ್ಯಕ್ಷ ತಿರುಮಲೇಶ್ವರ ಭಟ್ ಪಜ್ಜ ಸ್ವಾಗತಿಸಿ, ಕಾರ್ಯದರ್ಶಿ ವಾಮನ ನಾಯ್ಕ ಆರಂತೋಡು ವಂದಿಸಿದರು. ಪುರುಷೋತ್ತಮ ಭಟ್ ಪುದುಕೋಳಿ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ದಾನಿಗಳು ಧನಸಹಾಯದ ವಾಗ್ದಾನ ನೀಡಿದರು.ನಿಧಿ ಸಂಗ್ರಹ ಕೂಪನ್ ಗಳನ್ನು ವಿತರಿಸಲಾಯಿತು. ದೀಕ್ಷಾ, ಸಾತ್ವಿಕ್, ಋಷಿಕ್ ಪ್ರಾರ್ಥನೆ ಹಾಡಿದರು.ಶಾಂತಿಮಂತ್ರದೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.



