ಬದಿಯಡ್ಕ: ವಿರೋಧಿಗಳಿದ್ದಾಗ ಸೋಲಬಾರದು, ಪರವಾಗಿದ್ದಾಗ ಅಹಂಕಾರಗೊಳ್ಳದೆ ಬದುಕುವುದೇ ವ್ಯಕ್ತಿಯ ವ್ಯಕ್ತಿತ್ವದ ಸೂಚಕ. ಇನ್ನೊಬ್ಬರಿಗೆ ಹೊರೆಯಾಗದೆ ಆಸರೆಯಾಗುವುದು ಸಾರ್ಥಕ ಜೀವನ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಭಿಪ್ರಾಯವ್ಯಕ್ತಪಡಿಸಿದರು.
ಸ್ವರ್ಣೋಧ್ಯಮಿ ಸಮಾಜಸೇವಕ ಜಿ.ಎಲ್.ಆಚಾರ್ಯ ಪುತ್ತೂರು ಅವರ ಶತಮಾನದ ಸ್ಮರಣೆ ಹಾಗೂ ಕಿರುಹೊತ್ತಗೆ ಬಂಗಾರ ಬಿಡುಗಡೆ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ತಪ್ಪು ಮಾಡಿದವರನ್ನು ತಿದ್ದುವವರು ಗುರುಪರಂಪರೆ. ಪುತ್ತೂರಿನ ಸಾಮಾಜಿಕ ಸಾಂಸ್ಕøತಿಕ ಧಾರ್ಮಿಕ ಕ್ಷೇತ್ರಗಳಿಗೆ ಜಿ.ಎಲ್.ಆಚಾರ್ಯರು ನೀಡಿರುವುದು ಇಂತಹ ಗುರುತ್ವವನ್ನು. ಪ್ರೀತಿ ಸಂಸ್ಕøತಿ ಸಂಸ್ಕಾರಗಳು ಸಮಾಜದ ಸ್ಥಂಭಗಳಾಗಿದ್ದು, ಜಿ.ಎಲ್.ಆಚಾರ್ಯರಲ್ಲಿ ಇವು ಮೇಳೈಸಿತ್ತು. ಸಮಾಜದ ರೋಗಕ್ಕೆ ಮುಂಚೂಣಿಯಲ್ಲಿದ್ದವರು ಚಿಕಿತ್ಸಕರಾದಾಗ ತನ್ನಂತಹ ಓರ್ವ ವ್ಯಕ್ತಿ ಹುಟ್ಟಿಕೊಳ್ಳುವನೆಂದು ತಿಳಿಸುತ್ತಾ ತಮ್ಮ ರಾಜಕೀಯ, ಸಾಮಾಜಿಕ ಬದುಕಿಗೆ ಆಚಾರ್ಯರ ಕೊಡುಗೆಗಳನ್ನು ಸ್ಮರಿಸಿದರು. ಆಚಾರ್ಯರು ಕೇವಲ ವ್ಯಕ್ತಿಯಾಗಿರದೆ ಅಂತಃಸತ್ವದ ಪ್ರೇರಣಾದಾಯಿ ಶಕ್ತಿಯಾಗಿದ್ದರು ಎಂದು ಅವರು ತಿಳಿಸಿದರು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಶ್ರೀಮದೆಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು ಆಶೀರ್ವಚನವನ್ನು ನೀಡಿ ಕೆಲವರ ನೆನಪುಗಳು ಮರೆಯಲಾಗದೆ ಕಾಡುತ್ತಿರುತ್ತದೆ. ವ್ಯಕ್ತಿಯ ಬದ್ಧತೆ ಮತ್ತು ವ್ಯವಹಾರಿಕತೆಗಳು ಆತನನ್ನು ಬೆಳೆಸುತ್ತದೆ. ಆದರೆ ಜಿ.ಎಲ್.ಆಚಾರ್ಯರು ವ್ಯಾವಹಾರಿಕತೆಯನ್ನು ಮೀರಿ ಸಮಾಜದ ಎಲ್ಲಾ ವಿಭಾಗಗಳಲ್ಲೂ ಕೈಯಾಡಿಸಿ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಅವರ ಸರಳ, ಆದರ್ಶ ವ್ಯಕ್ತಿತ್ವ ಕಾರ್ಯೋತ್ಸಾಹಗಳು ಎಂದಿಗೂ ಚಿರಸ್ಥಾಯಿ ಎಂದು ನೆನಪಿಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪುತ್ತೂರು, ಜಿ.ಎಲ್.ಆಚಾರ್ಯರ ಪುತ್ರ ಬಲರಾಮ ಆಚಾರ್ಯ ದಂಪತಿಗಳು ಉಪಸ್ಥಿತರಿದ್ದರು. ರಾಷ್ಟ್ರ ರಾಜ್ಯಪ್ರಶಸ್ತಿ ಪುರಸ್ಕøತ ಶಿಕ್ಷಕ ನಾರಾಯಣ ಭಟ್ ಟಿ.ರಾಮಕುಂಜ ಸಂಸ್ಮರಣಾ ಭಾಷಣಗೈದರು. ಈ ಸಂದರ್ಭ ಜಿ.ಎಲ್.ಆಚಾರ್ಯರ ಸ್ಮರಣಾರ್ಥ ಪ್ರಕಟಿತವಾದ ಕೃತಿ `ಬಂಗಾರ'ವನ್ನು ಬಿಡುಗಡೆಗೊಳಿಸಿದರು. ಸಂಪಾದಕ ನಾ. ಕಾರಂತ ಪೆರಾಜೆ ಕೃತಿಪರಿಚಯ ಮಾಡಿದರು. ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ವಂದಿಸಿದರು. ಶ್ರೀಪತಿ ಕಲ್ಲೂರಾಯ ನಿರೂಪಿಸಿದರು. ಬಳಿಕ ಆಚಾರ್ಯ ರತ್ನಾಕರ ವಿದ್ವಾನ್ ವಿಠಲ ರಾಮಮೂರ್ತಿ ಇವರು ವಿಪ್ರಹಾರ್ ಬಳಗ ಚೆನೈ ಇವರ ಸಹಕಾರದೊಂದಿಗೆ ಕರ್ನಾಟಕ ಶೈಲಿಯ ವಿಶೇಷ ವಾದ್ಯಸಂಗೀತ ಪ್ರಸ್ತುತಪಡಿಸಿದರು. ವಿದ್ವಾನ್ ವಿಠಲರಾಮಮೂರ್ತಿ ಚೆನೈ (ವಯಲಿನ್) ವಿದ್ವಾನ್ ವಿಶ್ವಾಸ್ ಹರಿ ಚೈನೈ(ಮೆಂಡೋಲಿನ್) ವಿದ್ವಾನ್ ಪ್ರಣವ್ ಆರ್.ವಿ.ಚೆನೈ(ಕೀಬೋರ್ಡ್) ವಿದ್ವಾನ್ ಹರಿಹರನ್ ಸುಂದರರಾಮನ್ ಚೆನೈ (ತಾಳವಾದ್ಯ)ದಲ್ಲಿ ಸಹಕರಿಸಿದರು.
ಗಮನಾರ್ಹ ಅಭಿಮತ:
‘ನನ್ನನ್ನು ಮುಖ್ಯಮಂತ್ರಿಯನ್ನಾಗಿಸಿದ ಮಹನೀಯರು...
ಹಲವು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಬೆಳೆಸಿರುವ ಜಿ.ಎಲ್ ಆಚಾರ್ಯ ಅವರು ನನ್ನನ್ನು ಹಿಂದೆ ಪುತ್ತೂರಿನಲ್ಲಿ ಚುನಾವಣೆಗೆ ನಿಲ್ಲುವಲ್ಲೂ ಪ್ರೇರಣೆ ನೀಡಿದ್ದರು. ಜತೆಗೆ ಮುಖ್ಯಮಂತ್ರಿಯಾಗಲೂ ಆಚಾರ್ಯ ಅವರ ಆಶೀರ್ವಾದ, ಮಾರ್ಗದರ್ಶನ ನನಗೆ ಲಭಿಸಿತ್ತು. ಮುಂದೆ ಮುಖ್ಯಮಂತ್ರಿ ಆದಾಗಲೂ ಅವರಲ್ಲಿಗೆ ಹೋಗಿದ್ದೆ. ಪುತ್ತೂರಿನ ಸಾಮಾನ್ಯ ಕಾರ್ಯಕರ್ತನೊಬ್ಬ ಮುಖ್ಯಮಂತ್ರಿ ಆದಾಗ ಹೆಚ್ಚು ಆನಂದ ಪಟ್ಟವರಲ್ಲಿ ಜಿ.ಎಲ್ ಆಚಾರ್ಯ ಒಬ್ಬರಾಗಿದ್ದರು’ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅವರು ಹಿಂದಿನ ಘಟನೆಗಳನ್ನು ಮೆಲುಕುಹಾಕಿದರು.

.jpg)
.jpg)

