ಕಾಸರಗೋಡು: ವಿದ್ಯಾನಗರ ಸಿವಿಲ್ ಠಾಣೆಯ ಎಲ್ಲಾ ಜಿಲ್ಲಾ ಕಚೇರಿಗಳ ಸ್ವಚ್ಛತೆಗಾಗಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಪಿ.ಅಖಿಲ್ ತಿಳಿಸಿದ್ದಾರೆ. ಆನ್‍ಲೈನ್ ಮೂಲಕ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಫೆ.10ರಿಂದ 15ರೊಳಗೆ ವಿವಿಧ ಇಲಾಖೆಗಳ ನೌಕರರು ತಮ್ಮ ಕಚೇರಿ ಹಾಗೂ ವಠಾರವನ್ನು ಸ್ವಚ್ಛಗೊಳಿಸಬೇಕು. ಸ್ವಚ್ಛಗೊಳಿಸುವ ದಿನಾಂಕವನ್ನು ಆಯಾ ಕಚೇರಿಗಳು ನಿರ್ಧರಿಸಬಹುದು. ಪ್ಲಾಸ್ಟಿಕ್ ಸೇರಿದಂತೆ ಅಜೈವಿಕ ತ್ಯಾಜ್ಯವನ್ನು ಬೇರ್ಪಡಿಸಿ ಸಂಗ್ರಹಿಸಿ ಹಸಿರು ಕ್ರಿಯಾ ಸೇನೆಗೆ ಹಸ್ತಾಂತರಿಸಬೇಕು. ಸಾವಯವ ತ್ಯಾಜ್ಯ ವಿಲೇವಾರಿಗೂ ವ್ಯವಸ್ಥೆ ಕಲ್ಪಿಸಬೇಕು. ಕ್ಯಾಂಟೀನ್ ಸೇರಿದಂತೆ ಸಿವಿಲ್ ಸ್ಟೇಷನ್ ಆವರಣದಲ್ಲಿ ಅಜೈವಿಕ ತ್ಯಾಜ್ಯವನ್ನು ಎಸೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುವುದು ಎಂದು ಎ.ಡಿ.ಎಂ ಹೇಳಿದರು. ಶೌಚಗುಂಡಿ ತುಳುಕಿ ಹೊರಬರುತ್ತಿರುವ ತ್ಯಾಜ್ಯ ಸ್ಥಳಾಂತರಿಸುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ನೀಡಲಾಗಿದೆ. ಫೆ 15ರ ನಂತರ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಯಲಿದೆ ಎಂದು ತಿಳಿಸಿದರು.

