ಕಾಸರಗೋಡು: ಚಟ್ಟಂಚಾಲ್‍ನಲ್ಲಿ ಆಟವಾಡುವ ಮಧ್ಯೆ ಡಾಂಬಾರಿನ ಡಬ್ಬದೊಳಗೆ ಇಳಿದು, ಅದರೊಳಗೆ ಸಿಲುಕಿಕೊಂಡಿದ್ದು, ತಾಸುಗಳ ಪ್ರಯತ್ನದ ನಂತರ ಅಗ್ನಿಶಾಮಕ ದಳದ ನೆರವಿನಿಂದ ಹೊರತೆಗೆಯಲಾಗಿದೆ.
ಚಟ್ಟಂಚಾಲು ಎಂಐಸಿ ಕಾಲೇಜು ಸನಿಹದ ನಿವಾಸಿ ಖದೀಜಾ ಎಂಬವರ ನಾಲ್ಕುವರೆ ವರ್ಷ ಪ್ರಾಯದ ಬಾಲಕಿ ಫಾತಿಮಾ ಡಬ್ಬದೊಳಗೆ ಸಿಲುಕಿಕೊಂಡವಳು.ಸಹೋದರಿ ಜತೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ಫಾತಿಮಾ, ರಸ್ತೆಕಾಮಗಾರಿಗಾಗಿ ತಂದಿರಿಸಲಾಗಿದ್ದ ಡಾಂಬಾರು ಡಬ್ಬದೊಳಗೆ ಇಳಿದಿದ್ದಾಳೆ. ಡಬ್ಬದೊಳಗೆ ಡಾಂಬಾರು ಅರ್ಧ ತುಂಬಿಕೊಂಡಿದ್ದು, ಇದರ ಬಗ್ಗೆ ಅರಿವಿಲ್ಲದೆ ಬಾಲಕಿ ಸನಿಹದ ಕಲ್ಲಿನ ಮೇಲೇರಿ ಡಬ್ಬದೊಳಗೆ ಇಳಿದಿದ್ದು, ಕತ್ತಿನ ಭಾಗದ ವರೆಗೂ ಮುಳುಗಿದ್ದಳು. ತಕ್ಷಣ ಜತೆಗಿದ್ದ ಸಹೋದರಿ ತಾಯಿಗೆ ಮಾಹಿತಿ ನೀಡಿದ್ದಾಲೆ. ತಾಯಿ ಹಾಗೂ ಆಸುಪಾಸಿನವರು ಆಗಮಿಸಿ ಬಾಲಕಿಯನ್ನು ಡಾಂಬಾರಿನಿಂದ ಮೇಲಕ್ಕೆತ್ತಲು ಯತ್ನಿಸಿದರೂ, ಸಾಧ್ಯವಾಗಿರಲಿಲ್ಲ. ಬಿಸಿಲಿಗೆ ಮೆದುವಾಗಿದ್ದ ಡಾಂಬಾರು, ಕ್ರಮೇಣ ಗಟ್ಟಿಯಾಗಿದ್ದು, ಇದರಿಂದ ಬಾಲಕಿಯನ್ನು ಹೊರತೆಗೆಯಲಾಗದ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಡಾಂಬಾರಿಗೆ ಡೀಸೆಲ್ ಸೇರಿಸಿ ಮೆದುವಾಗಿಸಿದ ನಂತರ ಬಾಲಕಿಯನ್ನು ಹೊರತೆಗೆದು ಶುಚಿಗೊಳಿಸಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ.




