ಮುಳ್ಳೇರಿಯ: ಆದೂರು ಪೊಲೀಸ್ ಠಾನೆ ವ್ಯಾಪ್ತಿಯ ದೇಲಂಪಾಡಿ ಪಂಚಾಯಿತಿ ಅಡೂರಿನ ತಲ್ಪಚ್ಚೇರಿ ನಿವಾಸಿ ಮೋಹನ್ ಎಂಬವರ ಹಿತ್ತಿಲಲ್ಲಿನ ಉಪಯೋಗ ಶೂನ್ಯ ಬಾವಿಯಲ್ಲಿ ಚಿರತೆಯ ಕಳೇಬರ ಜೀರ್ಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆವರಣಗೋಟೆಯಿಲ್ಲದ ಬಾವಿ ಇದಾಘಿದ್ದು, ಬಾವಿಮೇಲ್ಭಾಗಕ್ಕೆ ಬಲೆ ಹಾಸಲಾಗಿತ್ತು. ಶುಕ್ರವಾರ ರಾತ್ರಿ ಈ ಪ್ರದೇಶದಲ್ಲಿ ದುರ್ವಾಸನೆ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಬಾವಿಯೊಳಗೆ ನೋಡಿದಾಗ ಚಿರತೆ ಕಳೇಬರ ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿ ರಾಜು ಪೆರುಂಬಳ ಅವರ ನೇತೃತ್ವದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಚಿರತೆ ಮೇಲಕ್ಕೆತ್ತಿ ಪಶು ವೈದ್ಯರ ಮೂಲಕ ಪಂಚನಾಮೆ ನಡೆಸಲಾಯಿತು. ಈ ಪ್ರದೇಶದಲ್ಲಿ ಕಳೆದ ಕಲೆವು ತಿಂಗಳಿಂದ ಚಿರತೆ ಸಂಚಾರದಿಂದ ಜನತೆ ಭೀತಿಗೊಳಗಾಗಿದ್ದರು. ಅರಣ್ಯಾಧಿಕಾರಿಗಳು ಬೋನು ಇರಿಸಿ ಚಿರತೆ ಸೆರೆಹಿಡಿಯುವ ಪ್ರಯತ್ನದ ನಡುವೆ ಎರಡು ಚಿರತೆಗಳು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಿಂಗಳ ಹಿಂದೆಯಷ್ಟೆ ಪಾಂಡಿ ಸಮೀಪ ಚಿರತೆಯೊಂದು ಕುಣಿಕೆಗೆ ಸಿಲುಕಿ ಸಾವನ್ನಪ್ಪಿದ್ದರೆ, ಅಡೂರಿನಲ್ಲಿ ಬಾವಿಗೆ ಬಿದ್ದು ಮೃತಪಟ್ಟಿದೆ.





