ಕಾಸರಗೋಡು: ಕುಂಬಳೆ ಆರಿಕ್ಕಾಡಿ ಕೋಟೆಯಲ್ಲಿ ನಿಧಿ ಶೋಧ ನಡೆಸಲು ಯತ್ನಿಸಿದ ಮೊಗ್ರಾಲ್ ಪುತ್ತೂರು ಗ್ರಾಪಂ ಉಪಾಧ್ಯಕ್ಷ ಮುಜೀಬ್ ಕಂಬಾರ್ ಅವರು ತಕ್ಷಣ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾಯಿಸಿದರು.
ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿಯು ಚೌಕಿ ಜಂಕ್ಷನ್‍ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿ ಉದ್ಘಾಟಿಸಿ ಮಾತನಾಡಿದರು. ನಿಧಿ ಶೋಧ ಗಂಭೀರ ಪ್ರಕರಣವಾಗಿದ್ದು, ಮುಸ್ಲಿಂ ಲೀಗ್ ಮುಖಂಡರ ಪ್ರಯತ್ನದಿಂದ ಇವರಿಗೆ ಠಾಣೆಯಿಂದ ಜಾಮೀನು ಲಭ್ಯವಾಗಿದೆ. ಮುಸ್ಲಿಂಲೀಗಿನ ಅರಿವಿನಲ್ಲೇ ನಿಧಿ ಶೋಧ ನಡೆದಿದ್ದು, ಇದು ಸಾರ್ವಜನಿಕ ಭದ್ರತೆಗೆ ಸವಾಲಾಗಿದೆ.
ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಜನಪ್ರತಿನಿಧಿಯೊಬ್ಬ ನಿಧಿ ಹುಡುಕಾಟಕ್ಕೆ ಇಳಿದಿರುವುದು ಖಂಡನೀಯ. ಮುಜೀಬ್ ತಕ್ಷಣ ರಾಜೀನಾಮೆ ನೀಡದಿದ್ದರೆ, ಬಿಜೆಪಿ ಪ್ರಬಲ ಪ್ರತಿಭಟನೆ ನಡೆಸಲಿದೆ ಎಂದು ಎಂ.ಎಲ್. ಅಶ್ವಿನಿ ಎಚ್ಚರಿಸಿದರು.
ಬಿಜೆಪಿ ಕಾಸರಗೋಡು ಕ್ಷೇತ್ರದ ಮಾಜಿ ಅಧ್ಯಕ್ಷೆ ಹಾಗೂ ಮೊಗ್ರಾಲ್ ಪುತ್ತೂರು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಾ ಗೋಪಾಲನ್, ಪಿ.ಆರ್. ಸುನಿಲ್ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಪ್ರಿಯಾ ನಾಯಕ್ ಸ್ವಾಗತಿಸಿದರು, ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿ ಅಧ್ಯಕ್ಷ ಚಂದ್ರಶೇಖರ್ ವಂದಿಸಿದರು.




