ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ಕಾಸರಗೋಡು ಮತ್ತು ಚೆಂಗಳ ಗ್ರಾಮ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ವತಿಯಿಂದ 9ನೇ ವಾರ್ಡು ಹರಿಶ್ರೀ ಸಂಘದ ಮೂಲಕ ನಡೆಸಲಾಗಿರುವ ಕಲ್ಲಂಗಡಿ ಕೃಷಿಯ ಕೊಯ್ಲು ಉತ್ಸವ ಜರುಗಿತು.
ಪ್ರಭಾರ ಜಿಲ್ಲಾ ಮಿಷನ್ ಸಂಯೋಜಕ ಸಿಎಚ್ ಇಕ್ಬಾಲ್ ಕಲ್ಲಂಗಡಿ ಕೊಯ್ಲು ಉತ್ಸವಕ್ಕೆ ಚಾಲನೆ ನೀಡಿದರು. ಚೆಂಗಳ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಎಸ್. ಸುನಿತಾ, ಚೆಂಗಳ ಗ್ರಾಂ ಪಂಚಾಯಿತಿ ಸದಸ್ಯ ಕೆ.ಹರೀಶ್, ಲೆಕ್ಕಾಧಿಕಾರಿ ಸಮದ್, ಅಗ್ರಿ ಸಿ.ಆರ್.ಪಿ.ಎಂ. ಪ್ರಸನ್ನ, ಜೆಎಲ್‍ಜಿ ಸಂಚಾಲಕ ಇ. ಸುಹರಾ, ಸಮುದಾಯದ ಸದಸ್ಯೆ ಬಿ.ಸುಮಲತಾ, ಜೆ.ಎಲ್.ಜಿ. ಸದಸ್ಯೆ ಎ. ಪ್ರೇಮಾ, ಕಮಲಾಕ್ಷನ್ ಮತ್ತು ಇತರ ಜೆಎಲ್‍ಜಿ ಸದಸ್ಯರು ಭಾಗವಹಿಸಿದ್ದರು.
ಹರಿಶ್ರೀ ಸಂಘದ ಸದಸ್ಯರು ಸುಮಾರು ಎರಡುವರೆ ಎಕರೆ ಭೂಮಿ ಗುತ್ತಿಗೆಗೆ ಪಡೆದು, ಇದರಲ್ಲಿ ಒಂದುವರೆ ಎಕರೆ ವಿಸ್ತೀರ್ಣದಲ್ಲಿ ಕಲ್ಲಂಗಡಿ ಬೆಳೆಸಿದ್ದರೆ, ಉಳಿದ ಜಾಗದಲ್ಲಿ ಬೆಂಡೆ, ಹರಿವೆ, ಅಲಸಂಡೆ, ಕೊತ್ತಂಬರಿಸೊಪ್ಪು, ಜಾನುವಾರುಗಳಿಗೆ ಮೇವಿನ ಹುಲ್ಲು ಸೇರಿದಂತೆ ವಿವಿಧ ಕೃಷಿ ನಡೆಸುತ್ತಿದ್ದಾರೆ. ಸಂಪೂರ್ಣ ಜೈವಿಕ ಕೃಷಿ ಇದಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕಲ್ಲಂಗಡಿ ಹಣ್ಣಿಗೆ ಕಿಲೋ ಒಂದಕ್ಕೆ 25ರೂ.ನಂತೆ ಮಾರಾಟಮಾಡಲಾಗಿದೆ. ಒಂದಷ್ಟು ಕಲ್ಲಂಗಡಿ ಹಣ್ಣು ಕಟಾವು ಮಾಡಲಾಗಿದ್ದು, ಇನ್ನೂ ಕೊಯ್ಲು ಬಾಕಿಯಿರುವುದಾಗಿ ಗುಂಪಿನ ಮುಖ್ಯಸ್ಥೆ ಪ್ರೇಮಾ'ವಿಜಯವಾಣಿ'ಗೆ ತಿಳಿಸಿದ್ದಾರೆ.


