ಕಾಸರಗೋಡು: ಸಿನಿಮಾವು ಎಲ್ಲ ಕಲೆಗಳ ಸಮ್ಮಿಲನವಾಗಿದ್ದು, ಸಿನಿಮಾ ನಿರ್ಮಾಣದಲ್ಲಿ ಸಾಹಿತ್ಯ, ಸಂಗೀತ, ನಾಟಕ, ರಾಜಕೀಯ ಇತ್ಯಾದಿ ಎಲ್ಲ ಜ್ಞಾನದ ನೆರವು ಬೇಕಾಗುತ್ತದೆ ಎಂದು ಸಿನಿಮಾ ನಿರ್ದೇಶಕ ಪ್ರಶಾಂತ್ ಪಂಡಿತ್ ಹೇಳಿದರು
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ಲೇಸ್ಮೆಂಟ್ ಸೆಲ್ ವತಿಯಿಂದ ಆಯೋಜಿಸಲಾಗಿದ್ದ'ಸಿನಿಮಾ ನಿರ್ಮಾಣದ ಸುತ್ತ-ಮುತ್ತ' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬತ್ರ್ಲೋಚಿ ಅವರ 'ಹಿಸ್ಟರಿ ಆಫ್ ವಾಟರ್'ಕಿರು ಚಿತ್ರವನ್ನು ಆಧರಿಸಿ ಸಿನಿಮಾ ಕಟ್ಟುವ ಕಲೆಯ ಬಗ್ಗೆ ಚರ್ಚಿಸಲಾಯಿತು.
ಕಾರ್ಯಕ್ರಮದ ಸಂಯೋಜಕ ಡಾ. ಗೋವಿಂದರಾಜು ಕಲ್ಲೂರು ಮಾತನಾಡಿ ಸಿನಿಮಾ ಕಟ್ಟುವಿಕೆಯ ಜೊತೆಗೆ ಸಿನಿಮಾ ನೋಡುವ ಕಲೆಯ ಬಗ್ಗೆಯೂ ನಾವು ಚಿಂತಸಬೇಕಾಗಿದೆ. ಕಲೆ ಮತ್ತು ಜನಪ್ರಿಯತೆಯ ನಡುವಿನ ವ್ಯತ್ಯಾಸವನ್ನು ಹಾಗೂ ಕಲೆಯ ಮೂಲಕ ಸಿನಿಮಾವೊಂದು ಕಟ್ಟಲು ಬಯಸಿದ ತಾತ್ವಿಕತೆಯನ್ನು ಅರಿಯಲು ವಿಶೇಷವಾದ ಆಸಕ್ತಿ ಮತ್ತು ಪೂರ್ವ ತಯಾರಿ ಬೇಕಾಗಿದೆ ಎಂದು ತಿಳಿಸಿದರು.
ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ. ಸೌಮ್ಯ ಹೆಚ್, ಪ್ರಾಧ್ಯಾಪಕರಾದ ಡಾ. ಪ್ರವೀಣ ಪದ್ಯಾಣ, ಚೇತನ್ ಮುಂಡಾಜೆ, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.






