ಪಟಿಯಾಲ: ಅಮೆರಿಕದಿಂದ ಗಡೀಪಾರಾಗಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರನ್ನು : ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅಮೆರಿಕದಿಂದ ಗಡೀಪಾರಾದ 116 ಭಾರತೀಯರನ್ನು ಹೊತ್ತ ಸಿ-17 ವಿಮಾನ ಭಾನುವಾರ ಬೆಳಿಗ್ಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು.
ಅವರನ್ನು ಮನೆಗೆ ಕಳಿಸುವ ಮುನ್ನ ಎಲ್ಲರನ್ನೂ ತಪಾಸಣೆ ಮಾಡಲಾಗಿದೆ. ಈ ವೇಳೆ ಪಟಿಯಾಲ ಜಿಲ್ಲೆಯ ರಾಜ್‌ಪುರದ ಇಬ್ಬರು ವ್ಯಕ್ತಿಗಳು ಕೊಲೆ ಆರೋಪ ಹೊಂದಿರುವುದು ಬಹಿರಂಗವಾಗಿದೆ.
ಸಂದೀಪ್ ಸಿಂಗ್ ಅಲಿಯಾಸ್ ಸನ್ನಿ ಮತ್ತು ಪ್ರದೀಪ್ ಸಿಂಗ್ ಬಂಧಿತರು. ಇವರು 2023ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದಾರೆ. ಸಂದೀಪ್ ಸೇರಿ ನಾಲ್ವರ ವಿರುದ್ಧ ರಾಜ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ಖಚಿತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಆಡಳಿತವು ಫೆ.5ರ ನಂತರ ಅಕ್ರಮ ವಲಸಿಗರ ವಿರುದ್ಧದ ಕಠಿಣ ಕ್ರಮದ ಭಾಗವಾಗಿ ಗಡೀಪಾರು ಮಾಡಿದ ಭಾರತೀಯರ ಎರಡನೇ ಬ್ಯಾಚ್ ಇಂದು ಬಂದಿದೆ.




