ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಟೀಕಿಸಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕಾಗಿ ತಮಿಳುನಾಡಿನ ಜನಪ್ರಿಯ ವೆಬ್‌ಸೈಟ್ ವಿಕಟನ್‌ಗೆ (Vikatan) ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ ಎಂದು ವರದಿಯಾಗಿದೆ.
ಫೆ.10ರಂದು ವಿಕಟನ್‌ನ ಡಿಜಿಟಲ್ ನಿಯತಕಾಲಿಕೆಯಾದ 'ವಿಕಟನ್ ಪ್ಲಸ್'ನಲ್ಲಿ ವಲಸಿಗ ಭಾರತೀಯರನ್ನು ಕೈಕೋಳ ಹಾಕಿ ಅಮೆರಿಕದಿಂದ ಗಡೀಪಾರು ಮಾಡುವ ವಿಷಯವನ್ನು ಎತ್ತಿ ತೋರಿಸುವ ವ್ಯಂಗ್ಯಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿತ್ತು.
ನಿರ್ಬಂಧದ ಕುರಿತಂತೆ ಗೊಂದಲಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆ ಶನಿವಾರ ತಡರಾತ್ರಿ ಹೇಳಿಕೆ ಬಿಡುಗಡೆ ಮಾಡಿರುವ ವಿಕಟನ್ ಗ್ರೂಪ್, 'ಹಲವಾರು ಓದುಗರು ನಮ್ಮ ವೆಬ್‌ಸೈಟ್‌ಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ' ಎಂದಿದೆ.
ವಿಕಟನ್‌ಪ್ಲಸ್‌ನಲ್ಲಿ ಪ್ರಕಟವಾಗಿರುವ ವ್ಯಂಗ್ಯಚಿತ್ರ
'ಒಂದು ಶತಮಾನಕ್ಕೂ ಹೆಚ್ಚು ಕಾಲ 'ವಿಕಟನ್' ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೃಢವಾಗಿ ಬೆಂಬಲಿಸಿದೆ. ನಾವು ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ತತ್ವಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ. ನಮ್ಮ ವೆಬ್‌ಸೈಟ್ ನಿರ್ಬಂಧಿಸುವುದರ ಹಿಂದಿನ ಕಾರಣಗಳೇನು ಎಂಬ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ. ಈ ವಿಷಯವನ್ನು ಸಚಿವಾಲಯದ ಮುಂದೆ ಪ್ರಸ್ತಾಪಿಸಲಿದ್ದೇವೆ' ಎಂದು ಹೇಳಿದೆ.
ಏತನ್ಮಧ್ಯೆ, ವೆಬ್‌ಸೈಟ್‌ಗೆ ನಿರ್ಬಂಧ ಹೇರಿರುವ ಬಗ್ಗೆ ಸರ್ಕಾರದ ಮೂಲಗಳಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.




