ಕಾಸರಗೋಡು : ಪುಸ್ತಕಗಳ ಓದುವಿಕೆಯನ್ನು ಆಸಕ್ತಿದಾಯಕ ಹಾಗೂ ಪ್ರತಿಷ್ಠೆಯ ವಿಷಯವನ್ನಾಗಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯದಂತೆ ಲಕ್ಷ ಗ್ರಂಥಾಲಯ ಯೋಜನೆಯನ್ನು ಆರಂಭಿಸಿರುವುದಾಗಿ ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರ್ಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದ್ದಾರೆ.
ಅವರು ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಬಹುನಿರೀಕ್ಷಿತ "ಮನೆಗೊಂದು ಗ್ರಂಥಾಲಯ " ಲಕ್ಷ ಗ್ರಂಥಾಲಯಗಳ ಯೋಜನೆಯ ಪ್ರಚಾರಾರ್ಥ ಕರಪತ್ರ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಸಂವಹನಗಳಿಂದಾಗಿ ಜನರಲ್ಲಿ ಇಂದು ಪುಸ್ತಕ ಖರೀದಿಸಿ ಓದುವ ಹವ್ಯಾಸ ದೂರಾಗುತ್ತಿದೆ. ಓದುವಿಕೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕನ್ನಡ ಪುಸ್ತಕೋದ್ಯವನ್ನು ನಿತ್ಯ ಚಿರಂತನವಾಗಿಸುವಲ್ಲಿ ಅಭಿಯಾನ ಸಹಕಾರಿಯಾಗಲಿರುವುದಾಗಿ ತಿಳಿಸಿದರು.
ಬೆಂಗಳೂರಲ್ಲಿ ಚಾಲನೆ:
ಯೋಜನೆಗೆ ಬೆಂಗಳೂರಿನ ಮುಖ್ಯಮಂತ್ರಿ ನಿವಾಸದಲ್ಲಿ ಚಾಲನೆ ನೀಡಲಾಗಿದ್ದು, ಎರಡನೆ ಕಾರ್ಯಕ್ರಮವನ್ನು ಕಾಸರಗೋಡಿನಲ್ಲಿ ಆಯೋಜಿಸಲಾಗಿದೆ. ಗಡಿನಾಡ ಜನತೆಯ ಪುಸ್ತಕ ಪ್ರೇಮ, ಭಾಷಾ ಪ್ರೇಮ ಗಮನದಲ್ಲಿರಿಸಿ ಕಾಸರಗೋಡಿನ ವಿವಿಧೆಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದೆ ಉಪ ಮುಖ್ಯಮಂತ್ರಿ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಅಭಿಯಾನ ಆಯೀಜಿಸಲಿರುವುದಾಗಿ ಡಾ. ಮಾನಸ'ವಿಜಯವಾಣಿ'ಗೆ ತಿಳಿಸಿದ್ದಾರೆ.
ಇ ಸಂದರ್ಭ ಲಕ್ಷ ಗ್ರಂಥಾಲಯಗಳ ಯೋಜನೆಯ ಪ್ರಚಾರಾರ್ಥ ಕರಪತ್ರವನ್ನು ಡಾ. ಮಾನಸ ಬಿಡುಗಡೆಗೊಳಿಸಿದರು. ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗೆ ಪುಸ್ತಕ ನೀಡಿ ಗಡಿನಾಡು ಕಾಸರಗೋಡಿನಲ್ಲಿ ಮನೆಗೊಂದು ಗ್ರಂಥಾಲಯ ಅಭಿಯಾನಕ್ಕೆ ಚಾಲನೆ ನೀಡಿದರು.
ಕನ್ನಡ ಸಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್‍ನಾರಾಯಣ್ ತೊಟ್ಟೆತ್ತೋಡಿ, ಪ್ರೊ. ಪಿ.ಎನ್ ಮೂಡಿತ್ತಾಯ, ಗಮಕ ಕಲಾ ಪರಿಷತ್‍ನ ಟಿ. ಶಂಕರನಾರಾಯಣ ಭಟ್, ಡಾ. ಕೆ. ಎನ್ ವೆಂಕಟ್ರಮಣ ಹೊಳ್ಳ, ರವಿ ನಾಯ್ಕಪು, ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಮೊದಲಾದವರು ಉಪಸ್ಥಿತರಿದ್ದರು. ಪ್ರೊ. ಎ.ಶ್ರೀನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.





