ಪೆರ್ಲ: ದೈವ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳು ಆ ಊರಿನ ಸುಭಿಕ್ಷೆಗೆ ಕಾರಣವಾಗುವುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರು ನಾಲ್ಕು ಗ್ರಾಮಗಳ ದೇವರಾದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮೇ 5 ರಿಂದ 12 ರ ತನಕ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ನಡೆಯಬೇಕಾದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ನಿಧಿ ಸಂಚಯನ 'ಪರ್ವ ಸನ್ನಾಹ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ದೇವಸ್ಥಾನಗಳು ಭಕ್ತಾದಿಗಳ ಒಟ್ಟುಗೂಡಿವಿಕೆಯ ಕೇಂದ್ರಗಳಾಗಿದ್ದು, ಅಲ್ಲಿ ನಡೆಯುವ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಜನಸಹಭಾಗಿತ್ವದೊಂದಿಗೆ ನಡೆದಾಗ ಹೆಚ್ಚಿನ ಶಕ್ತಿ ಪ್ರಾಪ್ತಿಯಾಗಲು ಸಾಧ್ಯ. ಚೌಗ್ರಾಮಸ್ಥರ ಒಟ್ಟುಗೂಡುವಿಕೆಯಿಂದ ಬ್ರಹ್ಮಕಲಶೋತ್ಸವ ನಡೆಸುವ ಮೂಲಕ ಶ್ರೀ ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗುವಂತೆ ಕಿವಿಮಾತು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅನುಗ್ರಹ ಭಾಷಣ ಮಾಡಿ, ಬ್ರಹ್ಮಕಲಶೋತ್ಸವದ ಲಾಂಛನ ಬಿಡುಗಡೆಗೊಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶಾಸ್ತ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷರಾದ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್, ಸದಾಶಿವ ಭಟ್ ಹರಿನಿಲಯ, ಗೋಪಾಲ ಮಣಿಯಾಣಿ ಗುತ್ತು ಮೊದಲಾದವರು ಉಪಸ್ಥಿತರಿದ್ದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ನಿಧಿಕುಂಭಕ್ಕೆ ಎಡನೀರುಶ್ರೀಗಳು ಕಾಣಿಕೆಯೊಂದಿಗೆ ಮಂತ್ರಾಕ್ಷತೆ ಸಲ್ಲಿಸಿ ಹರಸಿದರು.
ಈ ಸಂದರ್ಭ ಸತ್ಕರ್ಮದ ಶ್ರೇಯಸ್ಸಿಗಾಗಿ, ನಾಲ್ಕೂ ಗ್ರಾಮಗಳ ಭಕ್ತಜನತೆಗೆ ಈ ಸತ್ಕರ್ಮವನ್ನು ಯಶಸ್ವಿಯಾಗಿ ಮುನ್ನಡೆಸುವ ಶಕ್ತಿ ಪ್ರಾಪ್ತಿಯಾಗಿಸುವ ನಿಟ್ಟಿನಲ್ಲಿ 'ಶತರುದ್ರಾಭೀಷೇಕ, ರುದ್ರ ಪಾರಾಯಣ, ಬಲಿವಾಡು ಕೂಟ, ಭಕ್ತರಿಂದ ಭಗವಂತನಿಗೆ ಕಾಣಿಕೆ ಸಮರ್ಪಣೆ, ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ನಡೆಯಿತು. ದೇವಸ್ಥಾನ ಆಡಳಿತ ಮೊಕ್ತೇಸರ ತಾರಾನಾಥ ಶೆಟ್ಟಿ ಸ್ವಾಗತಿಸಿದರು. ಸುಧಾಕರ ಕಲ್ಲಗದ್ದೆ ವಂದಿಸಿದರು.




