ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಭಾರತದ ರೂಪಾಯಿ ಅಪಮೌಲ್ಯಕ್ಕೆ ಸಂಬಂಧಿಸಿದ ಟೀಕೆಗಳನ್ನು ಭಾನುವಾರ ಅಲ್ಲಗಳೆದಿದ್ದಾರೆ. ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಮಾತ್ರ ಕುಸಿದಿದೆ. ಬಲಿಷ್ಠ ಸಮಗ್ರ ಆರ್ಥಿಕ ಮೂಲಭೂತ ಅಂಶಗಳ ಕಾರಣದಿಂದಾಗಿ ಉಳಿದ ದೇಶಗಳ ಕರೆನ್ಸಿ ಎದುರು ಸ್ಥಿರವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಪಿಟಿಐ ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡ ಅವರು, ರೂಪಾಯಿ ಮೌಲ್ಯವು ಅಮೆರಿಕ ಡಾಲರ್ ಎದುರು ಕಳೆದ ಕೆಲವು ತಿಂಗಳುಗಳಿಂದ ಶೇ 3ರಷ್ಟು ಕುಸಿದಿದೆ. ಇದರಿಂದಾಗಿ, ಆಮದು ದುಬಾರಿಯಾಗಿದೆ ಎಂಬುದು ಕಳವಳದ ಸಂಗತಿ ಎಂದಿದ್ದಾರೆ.
'ಕಳವಳವಿದೆ. ಆದರೆ, 'ರೂಪಾಯಿ ದುರ್ಬಲವಾಗುತ್ತಿದೆ' ಎಂಬ ಟೀಕೆಗಳನ್ನು ಒಪ್ಪುವುದಿಲ್ಲ. ನಮ್ಮ ಸಮಗ್ರ ಆರ್ಥಿಕ ಮೂಲಭೂತ ಅಂಶಗಳು ಬಲಿಷ್ಠವಾಗಿವೆ. ಮೂಲಭೂತ ಅಂಶಗಳು ಅಷ್ಟು ಪ್ರಬಲವಾಗಿ ಇರದೇ ಇದ್ದರೆ, ಉಳಿದ ಕರೆನ್ಸಿಗಳ ಎದುರು ಸ್ಥಿರವಾಗಿ ಉಳಿಯುತ್ತಿರಲಿಲ್ಲ' ಎಂದು ಸಮರ್ಥಿಸಿಕೊಂಡಿದ್ದಾರೆ.
ಅಮೆರಿಕದ ಫೆಡರಲ್ ರಿಸರ್ವ್ ಕೈಗೊಂಡ ಉಪಕ್ರಮಗಳ ಪರಿಣಾಮವಾಗಿ ರೂಪಾಯಿ ಮೌಲ್ಯವು ಡಾಲರ್ ಎದುರು ಕೆಲವು ತಿಂಗಳುಗಳಿಂದ ಕುಸಿಯುತ್ತಾ ಸಾಗಿದೆ.
ರೂಪಾಯಿ ಮೌಲ್ಯ ಇಳಿಕೆ ತಡೆಗಟ್ಟಲು ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲು ಸಂಗ್ರಹದಿಂದ ₹6.67 ಲಕ್ಷ ಕೋಟಿ ಬಳಸಿದೆ. ಪ್ರಸ್ತುತ ವಿದೇಶಿ ವಿನಿಮಯ ಮೀಸಲು ಸಂಗ್ರಹ ₹ 54.57 ಲಕ್ಷ ಕೋಟಿ ಇದೆ.
'ಡಾಲರ್ ಎದುರು ರೂಪಾಯಿ ಮೌಲ್ಯ ಏರಿಳಿತವಾಗುತ್ತಿದೆ. ಆದಾಗ್ಯೂ, ಇತರ ರಾಷ್ಟ್ರಗಳ ಕರೆನ್ಸಿಗಿಂತ ಹೆಚ್ಚು ಸ್ಥಿರವಾಗಿದೆ' ಎಂದಿರುವ ನಿರ್ಮಲಾ, 'ಭಾರಿ ಪತನವನ್ನು ತಪ್ಪಿಸುವ ಹಾಗೂ ಮಾರುಕಟ್ಟೆಯಲ್ಲಿ ಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಮಾರ್ಗಗಳನ್ನು ಆರ್‌ಬಿಐ ಎದುರು ನೋಡುತ್ತಿದೆ. ನಾವೂ ಪರಿಸ್ಥಿತಿಯನ್ನು ನಿಕಟವಾಗಿ ಪರಿಶೀಲಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.




