ಕಾಸರಗೋಡು : ಜಿಲ್ಲೆಯ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಕ್ಷಿಪ್ರ ಕಾರ್ಯ ಪಡೆ(ಆರ್‍ಆರ್‍ಟಿ)ಮಂಜೂರುಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ರಾಜ್ಯದಲ್ಲಿ ಮಂಜೂರಾಗಲಿರುವ ಮೊದಲ ಆರ್‍ಆರ್‍ಟಿ ಕಾಸರಗೋಡು ಜಿಲ್ಲೆಗೆ ಲಭಿಸಲಿರುವುದಾಗಿ ರಾಜ್ಯ ಅರಣ್ಯ ಖಾತೆ ಸಚಿವ ಎ.ಕೆ.ಸಶೀಂದ್ರನ್ ತಿಳಿಸಿದರು.
ಅವರು ವೆಳ್ಳರಿಕುಂಡ್ ಮಿನಿ ಸಿವಿಲ್ ಸ್ಟೇಷನ್‍ನಲ್ಲಿ ಅರಣ್ಯ ಇಲಾಖೆಯ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಅರಣ್ಯದ ಅಂಚಿಗೆ ವಾಸಿಸುತ್ತಿರುವ ಜನತೆ ನಿರ್ಭಯವಾಗಿ ಬದುಕುವ ಸ್ಥಿತಿ ನಿರ್ಮಾಣವಾಗಲಿದ್ದು, ವನ್ಯಜೀವಿ ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳಲು ದೀರ್ಘಾವಧಿ ಮತ್ತು ಅಲ್ಪಾವಧಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ವಯನಾಡು ಮತ್ತು ಕಣ್ಣೂರಿನಲ್ಲಿ ಸಕಾಲದಲ್ಲಿ ಅನುಷ್ಠಾನಗೊಳಿಸಲು ಯೋಜನೆಗಳನ್ನು ರೂಪಿಸಲಾಗಿದ್ದು, ಕಾಸರಗೋಡು ಜಿಲ್ಲೆಯಲ್ಲೂ ಇದೇ ರೀತಿಯ ಯೋಜನೆ ತಯಾರಿಸಿ, ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭ ಸ್ಥಳೀಯ ನಿವಾಸಿಗಳಿಗೆ ಅರಣ್ಯ ಇಲಾಖೆ ನೀಡಿದ ಪ್ರಮಾಣ ಪತ್ರ, ಅರಣ್ಯ ಹಕ್ಕು ಕಾಯ್ದೆಯಡಿ ಕುಡಿಯುವ ನೀರಿನ ಯೋಜನೆಗೆ ಭೂಮಿ ಮಂಜೂರು ಮಾಡಿದ ದಾಖಲೆಯನ್ನು ಸಚಿವರು ಹಸ್ತಾಂತರಿಸಿದರು.
ಶಾಸಕ ಇ ಚಂದ್ರಶೇಖರನ್ ಶಾಸಕ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಪ್ರತೀಕಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಜೋಮೋನ್ ಜೋಸ್, ಪರಪ್ಪ ಬ್ಲಾಕ್ ಪಂಚಾಯಿತಿ ಸದಸ್ಯೆ ಶೋಬಿ ಜೋಸೆಫ್, ಬಳಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಂ.ರಾಧಾಮಣಿ, ಪಂಚಾಯಿತಿ ವಾರ್ಡ್ ಸದಸ್ಯ ಮೊಂಡಾಸಿ ಜಾಯ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳು,ಅಧಿಕಾರಿಗಳು ಉಪಸ್ಥಿತರಿದ್ದರು.
ಕಣ್ಣೂರು ತಿನೆರ್ನ್ ಸರ್ಕಲ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ದೀಪಾ ಸ್ವಾಗತಿಸಿದರು. ವಿಭಾಗೀಯ ಅರಣ್ಯಾಧಿಕಾರಿ ಕೆ. ಅಶ್ರಫ್ ವಂದಿಸಿದರು.





