ಕಾಸರಗೋಡು: ಹಣ್ಣುಹಂಪಲು ಮಾರಾಟದ ಮರೆಯಲ್ಲಿ ಮಾದಕ ಪದಾರ್ಥ ಮಾರಾಟ ನಡೆಸುತ್ತಿದ್ದ ಉಪ್ಪಳ ರೈಲ್ವೆ ನಿಲ್ದಾಣ ಸನಿಹದ ಬಿಸ್ಮಿಲ್ಲಾ ಮಂಜಿಲ್ ನಿವಾಸಿ ಹಾಗೂ ಕಾಸರಗೋಡು ಹಳೇ ಬಸ್ ನಿಲ್ದಾಣ ಸನಿಹ ರಸ್ತೆ ಬದಿ ಹಣ್ಣುಗಳ ಮಾರಾಟಗಾರ ಮಹಮ್ಮದ್ ಶಮೀರ್ ಬಿ.ಎಂ ಎಂಬಾತನನ್ನು ಕಾಸರಗೋಡು ನಗರಠಣೆ ಪೊಲೀಸರು ಹಾಗೂ 'ಡಾನ್ ಸೇಫ್'ನೇತೃತ್ವದ ವಿಶೇಷ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಈತನ ವಶದಲ್ಲಿದ್ದ 25.0ಗ್ರಾಂ ಎಂಡಿಎಂಎ ಹಾಗೂ 25ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಮಹಮ್ಮದ್ ಶಮೀರ್ ಬಿ.ಎಂ ಉಪ್ಪಳದಿಂದ ಬಸ್ಸಿನಲ್ಲಿ ಆಗಮಿಸಿ ಕರಂದಕ್ಕಾಡಿನಲ್ಲಿ ಇಳಿದಾಗ ಸಂಶಯಗೊಂಡು ಪೊಲೀಸರು ದೇಹತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠದಿಕಾರಿ ಶಿಲ್ಪಾ ಡಿ. ನಿರ್ದೇಶದನ್ವಯ ಡಿವೈಎಸ್‍ಪಿ ಸಿ.ಕೆ ಸುನಿಲ್ ಕುಮಾರ್, ಟಿ. ಉತ್ತಮ್‍ದಾಸ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.




