ಕಾಸರಗೋಡು: ವಾಸ್ತವ್ಯಕ್ಕೆ ಸ್ವಂತ ಮನೆಯಿಲ್ಲ. ಒಬ್ಬಾಕೆ ಕಾಯಿಲೆಯಿಂದ ಬಳಲುತ್ತಿರುವ ಪುತ್ರಿ ಸೇರಿದಂತೆ ಇಬ್ಬರು ಎಳೆಯ ಮಕ್ಕಳು, ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ದಯನೀಯ ಸ್ಥಿತಿಯಲ್ಲಿ ವಾಸಿಸುತ್ತಿರುವ ಹರೀಶ ಅವರ ಕುಟುಂಬಕ್ಕೆ ಕೇರಳ ಸರ್ಕಾರ ನಡೆಸುತ್ತಿರುವ ಅದಾಲತ್ ಭರವಸೆಯ ಬೆಳಕಾಗುತ್ತಿದೆ.
ಎಣ್ಮಕಜೆ ಪಂಚಾಯಿತಿ ಬಜಕೂಡ್ಲಿನಲ್ಲಿ ವಾಸಿಸುತ್ತಿರುವ ಹರೀಶ್-ಸಂಧ್ಯಾಸರಸ್ವತೀ ದಂಪತಿಯ ಏಳರ ಹರೆಯದ ಪುತ್ರಿ ಬಬಿತಾ ಥಲಸ್ಸಿಮಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಪುತ್ರಿ ಚಿಕಿತ್ಸೆಗಾಗಿ ದಂಪತಿ ಸಾವಿರಾರು ರೂ ಖರ್ಚುಮಾಡಿದ್ದಾರೆ. ದೇಹದಲ್ಲಿ ಸಾಕಷ್ಟು ಹಿಮೋಗ್ಲೋಬಿನ್ ಉತ್ಪಾದನೆಯಾಗದ ಹಿನ್ನೆಲೆಯಲ್ಲಿ ತಿಂಗಳಲ್ಲಿ ಒಂದರಿಂದ ಎರಡು ಬಾರಿ ಮಗುವಿಗೆ ರಕ್ತ ನೀಡುವ ವ್ಯವಸ್ಥೆಯಾಗಬೇಕಾಗುತ್ತಿದೆ. ಒಂದೆಡೆ ಮಗುವಿನ ಚಿಕಿತ್ಸಾ ವೆಚ್ಚ, ಇನ್ನೊಂದೆಡೆ ವಾಸ್ತವ್ಯಕ್ಕೆ ಸ್ವಂತ ಮನೆಯಿಲ್ಲದಿರುವುದು, ಕುಟುಂಬ ಪೋಷಣೆ ಜವಾಬ್ದಾರಿ ಇವೆಲ್ಲವೂ ಹರೀಶ್ ಅವರನ್ನು ಅಧೀರರನ್ನಾಗಿಸಿತ್ತು.
ಈ ಮಧ್ಯೆ ಮಂಜೇಶ್ವರ ತಾಲೂಕಲ್ಲಿ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಉಸ್ತುವಾರಿಯಲ್ಲಿ ನಡೆದ ಅದಾಲತ್, ಹರೀಶ್ ಕುಟುಂಬಕ್ಕೆ ಒಂದಷ್ಟು ಭರವಸೆಯ ಬೆಳಕನ್ನು ಹರಿಸಿದೆ. ಎಣ್ಮಕಜೆ ಗ್ರಾಮಪಂಚಾಯಿತಿ ಸದಸ್ಯೆ ಸೌದಾಬಿಹನೀಫ್ ನೇತೃತ್ವದಲ್ಲಿ ಹರೀಶ್ ಕುಟುಂಬಕ್ಕೆ ಎಣ್ಮಕಜೆ ಪಂಚಾಯಿತಿಯ ಕುರಡ್ಕ ಪ್ರದೇಶದಲ್ಲಿ ವಾಸ್ತವ್ಯಕ್ಕೆ ಮನೆಯೊಂದನ್ನು ಬಾಡಿಗೆಯಿಲ್ಲದೆ ನೀಡಲು ವ್ಯವಸ್ಥೆ ಕಲ್ಪಿಸಿದ್ದಾರೆ. ಜತೆಗೆ ಬಾಲಕಿಯನ್ನು ಅದಾಲತ್‍ಗೆ ಕರೆದೊಯ್ದು, ಕುಟುಂಬದ ದಯನೀಯಾವಸ್ಥೆಯನ್ನು ಸಚಿವರಿಗೆ ಮನವರಿಗೆ ಮಾಡಿದ್ದಾರೆ. ಮನೆಗೆ ವಿದ್ಯುತ್ ಸಂಪರ್ಕ, ರೇಶನ್ ಕಾರ್ಡು ಜತೆಗೆ ವಿಕಲಾಂಗ ಸರ್ಟಿಫಿಕೇಟ್ ಒದಗಿಸಲೂ ಸಚಿವರು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದು, ಇಂದು ಇವೆಲ್ಲವೂ ಕುಟುಂಬಕ್ಕೆ ಲಭ್ಯವಾಗಿದೆ. ಇನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ರಕ್ತ ನೀಡುವುದರ ಬದಲು ಕಾಸರಗೋಡಿನ ಸರ್ಕಾರಿ ಆಸ್ಪತ್ರೆಯಲ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯರ ಪ್ರಕಾರ ಬಾಲಕಿ ಅನಾರೋಗ್ಯ ಕಾಯಂ ಆಗಿ ವಾಸಿಯಾಗಲು ಮೂಳೆ ಮಜ್ಜೆಯ ಕಸಿ(ಬಿಎಂಟಿ)ಚಿಕಿತ್ಸೆ ಅನಿವಾರ್ಯವಾಗಿದ್ದು, ಇದಕ್ಕೆ 15ಲಕ್ಷ ರೂ. ವೆಚ್ಚ ತಗುಲಲಿದೆ. ಇದಕ್ಕಾಗಿ ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವ್ಯವಸ್ಥೆಯನ್ನೂ ನಡೆಸಲಾಗುತ್ತಿದೆ.
: ಹರೀಶ್ ಕುಟುಂಬಕ್ಕೆ ನೀಡಲಾಗಿರುವ ಮನೆ
: ಚಿಕಿತ್ಸೆಯಲ್ಲಿರುವ ಬಬಿತಾ
: ಅನಾರೋಗ್ಯಪೀಡಿತ ಬಾಲಕಿ ಬಬಿತಾಳಿಗೆ ಆರೋಗ್ಯ ಇಲಾಖೆ ನೀಡಿರುವ ವಿಕಲಚೇತನ ಸರ್ಟಿಫಿಕೇಟ್.








