ಕಾಸರಗೋಡು: ಭಾರತೀಯ ಕ್ರಿಕೆಟ್ ರಂಗಕ್ಕೆ ಅಪ್ರತಿಮ ಕೊಡುಗೆ ನೀಡುವ ಮೂಲಕ ದೇಶದ ಹೆಮ್ಮೆಯಾಗಿ ಮಿಂಚುತ್ತಿರುವ ಪದ್ಮಭೂಷಣ ಸುನೀಲ್ ಮನೋಹರ್ ಗವಾಸ್ಕರ್ ಅವರು ಕಾಸರಗೋಡು ನಗರಸಭಾ ಪೌರಸನ್ಮಾನ ಸ್ವೀಕಾರಕ್ಕಾಗಿ ಫೆ. 21ರಂದು ಮಧ್ಯಾಹ್ನ 3.30ಕ್ಕೆ ಕಾಸರಗೋಡಿಗೆ ಆಗಮಿಸಲಿರುವುದಾಗಿ ಕಾಸರಗೋಡು ಶಾಸಕ, ಸ್ವಾಗತ ಸಮಿತಿ ಅಧ್ಯಕ್ಷ ಎನ್.ಎ ನೆಲ್ಲಿಕುನ್ನು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭ ಕಾಸರಗೋಡು ವಿದ್ಯಾನಗರದ ನಗರಸಬಾ ಸ್ಟೇಡಿಯಂಗೆ ತೆರಳುವ ರಸ್ತೆಗೆ ಪದ್ಮಭೂಷಣ ಸುನಿಲ್ ಗಾವಸ್ಕರ್ ಅವರ ಹೆಸರನ್ನಿರಿಸಲು ನಗರಸಭೆ ತೀರ್ಮಾನಿಸಿದೆ. 'ಸುನಿಲ್ ಗವಾಸ್ಕರ್ ಮುನ್ಸಿಪಲ್ ಸ್ಟೇಡಿಯಂ ರಸ್ತೆ' ಎಂದು ನಾಮಕರಣ ಮಾಡಲಾಗಿದ್ದು, ಈ ಮಹತ್ವದ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನ ಆಗಮನಕ್ಕಾಗಿ ಕಾಸರಗೋಡು ನಗರವು ಸಜ್ಜುಗೊಳ್ಳುತ್ತಿದೆ.
ರಣಜಿ ಕ್ರಿಕೆಟ್ ಸೇರಿದಂತೆ ಹಲವು ಆಟಗಾರರನ್ನು ಕಾಸರಗೋಡು ಕ್ರಿಕೆಟ್ ಕ್ಷೇತ್ರಕ್ಕೆ ನೀಡಿದ್ದು, ಭಾರತೀಯ ಕ್ರಿಕೆಟ್‍ನ ಸಾರ್ವಕಾಲಿಕ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಕಾಸರಗೋಡು ಭೇಟಿಯನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸುವಂತೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ಫೆ.21ರಂದು ಮಧ್ಯಾಹ್ನ 3.30ಕ್ಕೆ ಸುನಿಲ್ ಗಾವಸ್ಕರ್ ಹೆಸರನ್ನಿರಿಸಲಾದ ನಗರಸಭಾ ಕ್ರೀಡಾಂಗಣಕ್ಕೆ ತೆರಳುವ ರಸ್ತೆಯ ಉದ್ಘಾಟನೆ ನೆರವೇರಿಸಲಾಗುವುದು. ನಂತರ ತೆರೆದ ವಾಹನದಲ್ಲಿ ಪದ್ಮಭೂಷಣ ಸುನಿಲ್ ಗಾವಸ್ಕರ್ ಅವರನ್ನು ಹಲವಾರು ವಾಹನಗಳ ಬೆಂಗಾವಲಿನೊಂದಿಗೆ ಎಸ್.ಪಿ ಕಚೇರಿ ವಠಾರದ ರಾಯಲ್ ಕನ್ವೆನ್ಷನ್ ಸೆಂಟರ್‍ಗೆ ಕರೆದೊಯ್ಯಲಾಗುವುದು. ರಾಯಲ್ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆಯಲಿರುವ ವಿಸ್ತೃತ ಸಮಾರಂಭದಲ್ಲಿ ಕಾಸರಗೋಡಿನ ಜನತೆಯ ಉಪಸ್ಥಿತಿಯಲ್ಲಿ ಭಾರತದ ಹೆಮ್ಮೆಯ ಕ್ರಿPಕೆಟ್ ತಾರೆಯನ್ನು ಸನ್ಮಾನಿಸಲಾಗುವುದು. ಜನಪ್ರತಿನಿಧಿಗಳು, ವಿವಿಧ ರಾಜಕೀಯ ಮುಖಂಡರು, ಅಧಿಕಾರಿಗಳು, ಕ್ರಿಕೆಟ್ ರಂಗದ ಪ್ರತಿಭೆಗಳು, ಕ್ರೀಡಾ ಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಸ್ವಾಗತ ಸಮಿತಿ ಕಾರ್ಯದರ್ಶಿ ಟಿ.ಎ ಶಾಫಿ, ಕೋಶಾಧಿಕಾರಿ ಕೆ.ಎಂ ಅಬ್ದುಲ್ ರಹಮಾನ್, ಮಾಧ್ಯಮ ವಿಭಾಗ ಅಧ್ಯಕ್ಷ ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಮಧುಸೂದನನ್, ಕಾಸರಗೋಡು ಪ್ರೆಸ್‍ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್, ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಜಹೀರ್ ಆಸಿಫ್, ನಗರಸಬ ಸದಸ್ಯ ಕೆ.ಎಂ. ಹನೀಫ್ ಉಪಸ್ಥಿತರಿದ್ದರು.






