ಕಾಸರಗೋಡು: ಜಿಲ್ಲೆಯಲ್ಲಿ ತಾಪಮಾನ ದಿನಕಳೆದಂತೆ ಏರಿಕೆಯಾಗುತ್ತಿದ್ದು, 38ಡಿಗ್ರಿಯ ಅಂಚಿಗೆ ತಲುಪಿದ್ದು, ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡುವವರು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕ ತಾಪಮಾನದ ಹಿನ್ನೆಲೆಯಲ್ಲಿ ಕಾಸರಗೋಡು ಸಏರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೊಟ್ಟಯಂ, ಆಲಪ್ಪುಯ, ಪತ್ತನಂತಿಟ್ಟ, ಕೊಲ್ಲಂ ಜಿಲ್ಲೆಗಳಲ್ಲಿ ಎಲ್ಲೊ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ತಾಪಮಾನದ ಜತೆಗೆ ವಿವಿದ ರೀತಿಯ ರೋಗಗಳು ಹರಡುವ ಸಾಧ್ಯತೆಯಿರುವುದಾಗಿ ತಿಳಿಸಲಾಗಿದ್ದು, ಈ ನಿಟ್ಟಿನಲ್ಲಿ ಜಾಗ್ರತೆ ಪಾಲಿಸುವಂತೆಯೂ ಸೂಚಿಸಲಾಗಿದೆ. ಮರ್ಚ್ 8 ರ ವರೆಗೆ ಅಧಿಕ ತಾಪಮಾನ ಮುಂದುವರಿಯಲಿದ್ದು, ಬಿಸಿಲಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಈ ಕಾಲಾವಧಿಯಲ್ಲಿ ಹೆಚ್ಚಿನ ಜಾಗ್ರತೆ ಪಾಲಿಸಬೇಕು. ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ಬಿಸಿಲಿಗೆ ಮೈಯೊಡ್ಡಿ ಕೆಲಸ ನಿರ್ವಹಿಸದಂತೆ ಹಾಗೂ ಹೆಚ್ಚಿನ ದ್ರವಾಹಾರ ಸೇವಿಸುವಂತೆಯೂ ಸೂಚಿಸಲಾಗಿದೆ.





