ಕಾಸರಗೋಡು: ಕೆಯುಡಬ್ಲೂಜೆ ಹೊರನಾಡಿನ ಘಟಕವಾಗಿರುವ ಕಾಸರಗೋಡು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ 25 ಲಕ್ಷ ರೂ ಮಂಜೂರು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಘಟನೆ ಪದಾಧಿಕಾರಿಗಳು ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಕಾಸರಗೋಡು ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅವರ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಕೇರಳ ರಾಜ್ಯದ ಕಾಸರಗೋಡು ಭಾಗದಲ್ಲಿ ಕನ್ನಡ ಪತ್ರಿಕೆಗಳು ಇಂದಿಗೂ ಹೆಚ್ಚಿನ ಪ್ರಸಾರ ಹೊಂದಿದ್ದು, ಕನ್ನಡ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರ ಹಿತ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಪತ್ರಕರ್ತರ ಸಂಘಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಕಾಸರಗೋಡು ಘಕದ ಮಾಡಿದ ಮನವಿಯನ್ನು ಪರಿಗಣಿಸಿ ಮುಖ್ಯಮಂತ್ರಿ 25 ಲಕ್ಷ ರೂ ಮಂಜೂರು ಮಾಡಿದ್ದರು.
ಇದೇ ಸಂದರ್ಭ ಕ್ಷೇಮಾಭಿವೃದ್ಧಿ ನಿಧಿಗೆ 25 ಲಕ್ಷ ಮಂಜೂರು ಮಾಡುವುದಕ್ಕೆ ಸತತ ಪರಿಶ್ರಮ ವಹಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ಪ್ರತ್ಯೇಕವಾಗಿ ಅಭನಂದಿಸಲಾಯಿತು. ಆರ್ಥಿಕ ನೆರವು ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ನೀಡಿದ ಸಹಕಾರವನ್ನು ಕಾಸರಗೋಡು ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅವರು ಸ್ಮರಿಸಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೋಮಣ್ಣ ಕೆರಗೋಡು, ಡಾ.ಮಲ್ಲಿಕಾರ್ಜುನನಾಸಿ, ಜೇಮ್ಸ್ ಮೆಂಡೋನ್ಸ್ ಕಾಸರಗೋಡು ಘಟಕದ ಪದಾಧಿಕಾರಿಗಳಾದ ಅಖಿಲೇಶ್, ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು.


