ಕಾಸರಗೋಡು: ಕೇರಳದಲ್ಲಿ ಸರ್ಕಾರಿ ನೌಕರರ ಬಗ್ಗೆ ಎಡರಂಗ ಸರ್ಕಾರ ಅನುಸರಿಸುತ್ತಿರುವ ಧೋರಣೆ ವಿರುದ್ಧ ಸಂಘಟಿತ ಹಾಗೂ ಅನಿರ್ದಿಷ್ಟಾವಧಿ ಮುಷ್ಕರ ಅಗತ್ಯವಾಗಿದೆ ಎಂದು ಎನ್‍ಜಿಒ ಸಂಘದ ರಾಜ್ಯ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ತಿಳಿಸಿದ್ದಾರೆ.
ಅವರು ಕೇರಳ ಎನ್‍ಜಿಒ ಸಂಘ 40ನೇ ಕಾಸರಗೋಡು ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಎಡರಂಗ ಸರ್ಕಾರ, ನೌಕರರ ವೇತನವನ್ನು ಹೊರತುಪಡಿಸಿ ಉಳಿದೆಲ್ಲ ಸವಲತ್ತುಗಳನ್ನು ಕಸಿದುಕೊಂಡಿದೆ. ಸಹಭಾಗಿತ್ವದ ಪಿಂಚಣಿ ಯೋಜನೆಯನ್ನು ಹಿಂತೆಗೆದುಕೊಳ್ಳಲಿಲ್ಲ, ಹನ್ನೆರಡನೇ ವೇತನ ಆಯೋಗವನ್ನು ಇದುವರೆಗೆ ನೇಮಕ ಮಾಡದೆ, ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಸರ್ಕಾರ ಹಲವು ಕಾರ್ಮಿಕ ವಿರೋಧಿ ಧೋರಣೆ ಕೈಗೊಳ್ಳುತ್ತಿದ್ದರೂ, ಎಡ ಸಂಘಟನೆಗಳು ಸರ್ಕಾರವನ್ನು ನಿರಂತರ ಬೆಂಬಲಿಸಿಕೊಂಡು ಬರುವ ಮೂಲಕ ನೌಕರರನ್ನು ವಂಚಿಸುತ್ತಿರುವುದಾಗಿ ದೂರಿದರು.
ಎನ್‍ಜಿಓ ಸಂಘದ ಜಿಲ್ಲಾಧ್ಯಕ್ಷ ಕೆ.ರಂಜಿತ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಶ್ರೀ ಕೆ.ವಿ. ಬಾಬು, ಕೆ.ಜಿ.ಓ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಕೆ, ಕೇರಳ ರಾಜ್ಯ ಪಿಂಚಣಿದಾರರ ಸಂಘದ ಜಿಲ್ಲಾಧ್ಯಕ್ಷ ಕುಞÂರಾಮನ್ ಕೇಳೋತ್, ಕೇರಳ ಜಲ ಪ್ರಾಧಿಕಾರ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮನ್ ಕೆ.ವಿ., ರಾಷ್ಟ್ರೀಯ ಶಿಕ್ಷಕರ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ, ಕೆಎಸ್.ಟಿ.ಇ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಜಯಕುಮಾರ್ ಎಂ ಉಪಸ್ಥಿತರಿದ್ದರು.
ಎನ್‍ಜಿಒ ಸಂಘದ ಜಿಲ್ಲಾ ಕಾರ್ಯದರ್ಶಿ ವಿ.ಶ್ಯಾಮಪ್ರಸಾದ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ರಂಜಿತ್ ರಾಘವನ್ ವಂದಿಸಿದರು. ಈ ಸಂದರ್ಭ ಸಂಘಟನೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾಧ್ಯಕ್ಷರಾಗಿ ಕೆ.ರಂಜಿತ್, ಕಾರ್ಯದರ್ಶಿ ಪಿ.ಸಿ.ಸುನೀಲ್ ಹಾಗೂ ಕೋಶಾಧಿಕಾರಿಯಾಗಿ ಕೆ.ರವಿಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

