ಬದಿಯಡ್ಕ: ಮಾನ್ಯ ಉಳ್ಳೋಡಿ ನಿವಾಸಿ ದೈವ ಕಲಾವಿದ ಗಣೇಶ್ ಎಂಬವರ ಮನೆ ಸನಿಹದ ಹಟ್ಟಿಯಲ್ಲಿ ಬಿಗಿಯಲಾಗಿದ್ದ ದನದ ಕರುವಿನ ಮೇಲೆ ಅಜ್ಞಾತ ಜೀವಿಯ ದಾಳಿಯಿಂದ ಉಂಟಾಗಿರುವ ಗಾಯದ ಗುರುತು ಪತ್ತೆಯಾಗಿದ್ದು, ಇದರ ಜತೆಗೆ ಮನೆಯಲ್ಲಿ ಸಾಕುವ ಕೋಳಿಯ ಮೇಲೂ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಕರುವಿನ ಬೆನ್ನ ಮೇಲೆ ಪರಚಿದ ಗಾಯಗಳುಂಟಾಗಿರುವುದು ಬುಧವಾರ ಕಂಡುಬಂದಿದ್ದು, ಗುರುವಾರ ಬೆಳಗ್ಗೆ ದೊಡ್ಡ ಹುಂಜವೊಂದು ಗಾಯದ ಗುರುತಿನೊಂದಿಗೆ ಬಿದ್ದಿರುವುದು ಕಂಡುಬಂದಿದೆ. ಈ ಕೋಳಿ ಮನೆ ಸನಿಹದ ಮರದಲ್ಲಿ ರಾತ್ರಿ ವೇಳೆ ಕುಳಿತುಕೊಳ್ಳುತ್ತಿದ್ದು, ಬೆಳಗ್ಗೆ ಮರದಿಂದ ಬಿದ್ದು, ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದರೂ, ದಾಳಿ ನಡೆಸಿದ ಪ್ರಾಣಿಯ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.




