ಬದಿಯಡ್ಕ:ಹುಟ್ಟು ಮತ್ತು ಸಾವಿನ ನಡುವಿನ ಜೀವನ ಪಾವನವಾಗಬೇಕಾದರೆ ವಿಶ್ವವ್ಯಾಪಿ ವಿಷ್ಣುವಿನ ಅನುಗ್ರಹ ಬೇಕು. ನೆಮ್ಮದಿ ಎನ್ನುವುದು ಐಹಿಕ ವಸ್ತುಗಳಿಂದ ಸಾಧ್ಯವಾಗದು. ಆ ಮಾಯೆಯಿಂದ ಹೊರಬಂದು ಆಧ್ಯಾತ್ಮದೆಡೆಗೆ ಚಲಿಸಿದಾಗ ಸೌಖ್ಯ ನೆಲೆಗೊಳ್ಳುತ್ತದೆ. ಇಂಟರ್ ನೆಟ್ ನಲ್ಲಿ ವಿಶ್ವವನ್ನು ನೋಡುವ ಇಂದಿನ ಕಾಲಘಟ್ಟದಲ್ಲಿ ಪರಿತಾಪಗಳಿಂದ ಪಾರಾಗಲು ವಿಶ್ವನಾಥನನ್ನು ಕಾಣಲು ಇನ್ನರ್ ನೆಟ್ ಗೆ ತೊಡಗಿಸುವ ಆಧ್ಯಾತ್ಮ ಲೋಕಕ್ಕೆ ಬದುಕನ್ನು ಒಗಿಸಿಕೊಳ್ಳಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ತಿಳಿಸಿದರು.
ನೀರ್ಚಾಲು ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಧರ್ಮದ ಹಾದಿ ತೋರಿಸಲು ಶ್ರದ್ಧಾಕೇಂದ್ರಗಳು ಬೇಕು. ಆತ್ಮೋದ್ಧಾರದ ಕಾರಣ ಬಿಂಬ ಪ್ರತಿಷ್ಠೆಯ ಜೊತೆಗೆ ಮನಸ್ಸಿನಲ್ಲೂ ಅದು ಪ್ರತಿಬಿಂಬಿಸಬೇಕು. ಸಂತೃಪ್ತಿ ಎನ್ನುವುದು ಭೋಗ ಜೀವನದಲ್ಲಿ ಇರದು, ಅದರ ಪ್ರಾಪ್ತಿಗೆ ತ್ಯಾಗಮಯ ಜೀವನವೊಂದೇ ಕಾರಣ ನಾನೆನ್ನುವುದನ್ನು ಮೀರಿ ನಿಂತಾಗ ನಾರಾಯಣನ ಅನುಗ್ರಹ ಲಭಿಸುತ್ತದೆ ಎಂದವರು ಆಶೀರ್ವಚನದಲ್ಲಿ ತಿಳಿಸಿದರು.
ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಧಾರ್ಮಿಕ ಭಾಷಣ ನೀಡಿ ಮಾತನಾಡಿದ ಡಾ.ರಾಧಾಕೃಷ್ಣ ಬೇಂಗ್ರೋಡಿ ಅವರು, ವಿವೇಕದ ಸಾಧನಾ ಶರೀರ ನೀಡಿರುವ ಭಗವಂತನ ಪೂರ್ಣಆನುಗ್ರಹಕ್ಕೆ ಧರ್ಮ, ದೇಶ ಮತ್ತು ದೇವರೆಂಬ ’3ಡಿ’ ಶಕ್ತಿಗಳ ಬಗ್ಗೆ ಗೌರವಪೂರ್ವಕ ಆಧರ ಇರಲೇಬೇಕು. ಈ ಮೂರು ತಳಹದಿಯಲ್ಲಿ ಪರಂಪರೆಯನ್ನು ಗೌರವಿಸಿ ಬದುಕು ಮುನ್ನಡೆಸಿದಾಗ ನಮ್ಮೊಳಗಿನ ಕ್ಷೀರಸಾಗರದಿಂದ ಅಮೃತ ಉಕ್ಕಿ ಬದುಕು ಸಾರ್ಥಕತೆ ಪಡೆಯುತ್ತದೆ. ರಾಷ್ಟ್ರದ ಕಣ್ಣುಗಳಾಗಿರುವ ದೇವಾಲಯಗಳು ಸುಸ್ಥಿತಿಯಲ್ಲಿದ್ದು ಕಾಲ ದುಃಖ ಕಾಡದು ಎಂದವರು ನೆನಪಿಸಿದರು.
ಸರ್ಕಾರಿ ವೈದ್ಯಾಧಿಕಾರಿ ಡಾ.ಜಯಶ್ರೀ ನಾಗರಾಜ್, ಧಾರ್ಮಿಕ, ಸಾಮಾಜಿಕ ಮುಂದಾಳು ಮಂಜುನಾಥ ಆಳ್ವ ಮಡ್ವ, ಉದ್ಯಮಿ ಶಂಕರನಾರಾಯಣ ಮಯ್ಯ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕುಂಜರಕಾನ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ನವೀನ್ ಕುಮಾರ್ ಭಟ್, ನಿವೃತ್ತ ಉಪ ಪ್ರಾಂಶುಪಾಲ ಪ್ರೊ,.ಎ.ಶ್ರೀನಾಥ್, ಉದ್ಯಮಿ ಶ್ಯಾಮಪ್ರಸಾದ್ ಕಾರ್ಮಾರು, ಶ್ರೀಕೃಷ್ಣ ಭಟ್ ಕಾರ್ಮಾರು, ಉದ್ಯಮಿ ಕೃಷ್ಣ ಪ್ರಸಾದ ಚಿತ್ತಾರಿ, ಸುರೇಶ್ ಕೌಲಲಾಂಪುರ, ರಮೇಶ ಅರ್ತಲೆ ಮಾತನಾಡಿದರು. ಮಾನ್ಯ ಜ್ಞಾನೋದಯ ಶಾಲಾ ಮುಖ್ಯೋಪಾಧ್ಯಾಯ ಸುರೇಂದ್ರನ್ ಮಾಸ್ತರ್ ಸ್ವಾಗತಿಸಿ, ಹರ್ಷಿತ ಟೀಚರ್ ಕಾರ್ಮಾರು ವಂದಿಸಿದರು. ಯುವಕ ವೃಂದದ ಅಧ್ಯಕ್ಷ ವಿಜಯಕುಮಾರ್ ಮಾನ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದುಷಿಃ ಪನ್ನಗ ಜಿ.ರಾವ್ ಉಡುಪಿ ಇವರಿಂದ ಭರತನಾಟ್ಯ ಪ್ರದರ್ಶನ, ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಬಳಗದವರಿಂದ ಭಕ್ತಿ ಸಿಂಚನ ಗಾಯನ ಕಾರ್ಯಕ್ರಮ ನಡೆಯಿತು.

.jpg)
.jpg)
