ಕಾಸರಗೋಡು: ಶಾಲಾ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ಕಳನಾಡು ನಿವಾಸಿ ಸಮೀರ್ ಎಂಬಾತನನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಬಂಧನಕ್ಕೆ ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಈತನನ್ನು ಹಿಂಬಾಲಿಸಿ ಸೆರೆಹಿಡಿಯಲಾಗಿದೆ. ಟೌನ್ ಸ್ಟೇಶನ್ ಸಿಪಿಓ, ನೀರ್ಚಾಲು ನಿವಾಸಿ ಭಕ್ತಶೈವಲ್ ಎಂಬವರು ನೀಡಿದ ದುರಿನ ಮೇರೆಗೆ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಬಗ್ಗೆಯೂ ಕೇಸು ದಾಖಲಿಸಲಾಗಿದೆ.
ಕಾಸರಗೋಡು ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಲೆಯ 15ಹಾಗೂ 16ರ ಹರೆಯದ ನಾಲ್ವರು ವಿದ್ಯಾರ್ಥಿಗಳಿಂದ ಪೊಲೀಸರು ಒಟ್ಟು 12.06ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿದಾಗ ಕಳನಾಡು ನಿವಾಸಿ ಸಮೀರ್ ಗಾಂಜಾ ಪೂರೈಸಿರುವುದಾಗಿ ಮಾಹಿತಿ ನೀಡಿದ್ದರು. ಶಾಲೆಯಲ್ಲಿ ನಡೆಯುವ ಸಮಾರಂಭದ ಮಧ್ಯೆ ಗಾಂಜಾ ಮಾರಾಟವಾಗುವ ಸಾಧ್ಯತೆ ಬಗ್ಗೆ ಪೊಲೀಸರಿಗೆ ಲಭಿಸಿದ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಿದಾಗ ನಾಲ್ಕು ಮಂದಿ ವಿದ್ಯಾರ್ಥಿಗಳು ವೇದಿಕೆ ಹಿಂಭಾಗದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿರುವುದನ್ನು ಮನಗಂಡ ಪೊಲೀಸರು ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಇವರ ಜೇಬಲ್ಲಿ ಗಾಂಜಾ ಪತ್ತೆಯಾಗಿತ್ತು.
ಜಿಲ್ಲೆಯಲ್ಲಿ ಶಾಲಾ ಮಕ್ಕಳನ್ನು ಕೇಂದ್ರೀಕರಿಸಿ ಗಾಂಜಾ ಪೂರೈಸುವ ತಂಡ ಸಕ್ರಿಯವಾಗಿದ್ದು, ಈಗಾಘಲೇ ಹಲವು ಮಂದಿ ವಿದ್ಯಾರ್ಥಿಗಳು ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ದಸರಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.




