ಬೆಂಗಳೂರು:'ಕನ್ನಡ ಸಾಹಿತ್ಯ ಪರಿಷತ್ತ'ನ್ನು ಸರ್ವಾಧಿಕಾರಿದತ್ತ ಕೊಂಡೊಯ್ಯುತ್ತಿರುವ, ಆರ್ಥಿಕ ಆಶಿಸ್ತಿನ ಮೂಲಕ ದಿವಾಳಿ ಮಾಡುತ್ತಿರುವ, ಅಧಿಕಾರಿ ಕೇಂದ್ರೀಕರಣಕ್ಕಾಗಿ ಮನಸೋ ಇಚ್ಛೆ ತಿದ್ದುಪಡಿ, ಪ್ರಶ್ನಿಸಿದವರಿಗೆ ನೋಟಿಸ್ನಿಂದ ಕಿರುಕುಳ ಮತ್ತು ಸಾಹಿತ್ಯ ಚಟುವಟಿಕೆಗಳಿಂದ ದೂರಾಗಿಸುತ್ತಿರುವ ಅಧ್ಯಕ್ಷರನ್ನು ಅಮಾನತ್ತಿನಲ್ಲಿಟ್ಟು ಆಡಳಿತಾಧಿಕಾರಿಯನ್ನು ನೇಮಿಸುವಂತೆ ಸಮಾನ ಮನಸ್ಕರ ಒಕ್ಕೂಟ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದೆ.
ನಾಡಿನ ಹೆಮ್ಮೆಯ ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಶತಮಾನ ಕಂಡಿದೆ. ಕನ್ನಡ, ಸಾಹಿತ್ಯ,ಸಂಸತಿ ನಾಡಿನೆಲ್ಲಡೆ ಪಸರಿಸಲಿ ಎಂಬ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಇದನ್ನು ಸ್ಥಾಪಿಸಿದ್ದರು. ಆದರೆ, ಪರಿಷತ್ತು ಬಗ್ಗೆ ಗಂಧಗಾಳಿ ಗೊತ್ತಿಲ್ಲದ, ಸಂಸತಿಯ ಅರಿವಿಲ್ಲದ ಮತ್ತು ಭಾಷೆ ಮಹತ್ವ ತಿಳಿಯದ ವ್ಯಕ್ತಿಯ ಕೈಯಲ್ಲಿ ಸಿಲುಕಿ ವಿನಾಶದತ್ತ ಸಾಗುತ್ತಿದೆಯೆಂದು ಹೇಳಲು ವಿಷಾಧವಾಗುತ್ತಿದೆ. ಆರ್ಥಿಕ ಆಶಿಸ್ತು ಅಳವಡಿಸಿಕೊಂಡು ತನ್ನನ್ನು ಯಾರು ಪ್ರಶ್ನಿಸಬಾರದು, ಯಾವ ಲೆಕ್ಕವನ್ನೂ ಕೇಳಬಾರದು ಮತ್ತು ನಾನು ಮಾಡಿದ್ದನ್ನು ಮಿಕ್ಕೆರಲ್ಲರೂ ಒಪ್ಪಿಕೊಳ್ಳಬೇಕು ಎಂಬ ದಾಷ್ಟ್ರ್ಯತನ ಪರಮಾವಧಿಗೆ ಅಧ್ಯಕ್ಷರು ತಲುಪಿದ್ದಾರೆ ಎಂದು ಸಿಎಂಗೆ ಬರೆದಿರುವ ಪತ್ರದಲ್ಲಿ ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ(ಹಂಪನಾ), ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ್, ಎಸ್.ಜಿ.ಸಿದ್ದರಾಮಯ್ಯ, ಕೆ.ಎಸ್. ವಿಮಲ ಸೇರಿ ಹತ್ತಾರು ಸಾಹಿತಿಗಳು ಸಹಿ ಹಾಕಿದ್ದಾರೆ.
ಹಾಲಿ ಅಧ್ಯಕ್ಷರನ್ನು ತಕ್ಷಣವೇ ಅಮಾನತ್ತಿಲ್ಲಿಟ್ಟು ವಿಚಾರಣೆಗೊಳಪಡಿಸಬೇಕು. ಸಚಿವ ಸ್ಥಾನಮಾನದ ಹೆಸರಲ್ಲಿ ದರ್ಪ, ದೌಲತ್ತು ಪ್ರದರ್ಶಿಸುತ್ತಿರುವುದರಿಂದ ಆ ಸ್ಥಾನಮಾನ ಹಿಂಪಡೆಯಬೇಕು. ಅಕ್ರಮ ಮಾರ್ಗದಿಂದ ಮಾಡಿಕೊಂಡಿರುವ ಅಧಿಕಾರವಾಧಿಯನ್ನು 5 ವರ್ಷದಿಂದ 3 ವರ್ಷಕ್ಕೆ ಇಳಿಸಬೇಕು. ಈ ಅಧ್ಯಕ್ಷರ ಅವಧಿಯಲ್ಲಿರುವ 2 ಅಕ್ರಮ ತಿದ್ದುಪಡಿ ರದ್ದುಪಡಿಸಬೇಕು. ಸರ್ವಾಧಿಕಾರಿ ಧೋರಣೆ ನಿಯಂತ್ರಿಸಲು ಮುಂದಾಗಬೇಕು. ಈ ಅಧ್ಯಕ್ಷರಿಂದ ಅಮಾನತ್ತಾಗಿರುವ ಸದಸ್ಯರ ಸದಸ್ಯತ್ವವನ್ನು ಹಿಂತಿರುಗಿಸಬೇಕು. ಮುಂದಿನ ಸಮ್ಮೇಳನಕ್ಕೆ 40 ಕೋಟಿ ಕೊಡಬೇಕೆಂಬ ಪ್ರಸ್ತಾಪವನ್ನು ತಿರಸ್ಕರಿಸಬೇಕು ಎಂದು ಸಿಎಂಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.




