ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ಮತ್ತು ಸುಭದ್ರ ಸರ್ಕಾರ ರಚಿಸುವಂತೆ ಒತ್ತಾಯಿಸಿ 21 ಶಾಸಕರು ಗೃಹ ಸಚಿವ ಅಮಿತ್ ಶಾ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.
ಮಣಿಪುರದಲ್ಲಿ ಮೇ 2023ರಿಂದ ಮೈತೇಯಿ ಮತ್ತು ಕುಕಿ ಜನಾಂಗಗಳ ನಡುವೆ ನಡೆದ ಸಂಘರ್ಷದಲ್ಲಿ ಸುಮಾರು 250ಕ್ಕೂ ಹಚ್ಚು ಜನರು ಮೃತಪಟ್ಟಿದ್ದಾರೆ.
ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಈ ಬೆಳವಣಿಗಳ ನಡುವೆ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ಫೆಬ್ರುವರಿ 13ರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಏರಲಾಗಿದೆ.
ಆದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದರೂ ಅಂತಹ ಮಹತ್ತರ ಬದಲಾವಣೆಗಳು ಆಗಿಲ್ಲ ಮತ್ತು ಶಾಂತಿ ಸಂಪೂರ್ಣವಾಗಿ ಮರುಸ್ಥಾಪನೆಯಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ಜನಪ್ರಿಯ ಸರ್ಕಾರ ರಚಿಸುವುದು ಅಗತ್ಯವಾಗಿದೆ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದು ತಿಂಗಳುಗಳೇ ಕಳೆದಿವೆ. ಆದರೆ ರಾಷ್ಟ್ರಪತಿ ಆಳ್ವಿಕೆ ವಿರುದ್ಧ ಜನರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಮಣಿಪುರದಲ್ಲಿ ಹಿಂಸಾಚಾರ ಸಂಭವಿಸಬಹುದು ಎಂಬ ಆತಂಕದಲ್ಲಿ ಜನರು ಇದ್ದಾರೆ. ವಿಧಾನಸಭೆಯ ಅಧಿಕಾರಾವಧಿ 2027ರವರೆಗೆ ಇರುವುದರಿಂದ ರಾಜ್ಯದಲ್ಲಿ ಬಲಿಷ್ಠ ಸರ್ಕಾರ ರಚಿಸುವಂತೆ ಕೋರಿ 13 ಬಿಜೆಪಿ ಶಾಸಕರು , ಎನ್‌ಪಿಪಿಯ 3 ಶಾಸಕರು, ನಾಗಾ ಪೀಪಲ್ಸ್ ಫ್ರಂಟ್‌ನ 3 ಶಾಸಕರು ಮತ್ತು ವಿಧಾನಸಭೆಯ ಇಬ್ಬರು ಸ್ವತಂತ್ರ ಸದಸ್ಯರು ಮನವಿ ಮಾಡಿದ್ದಾರೆ.
ಮಣಿಪುರವನ್ನು ಸಾಮಾನ್ಯ ಸ್ಥಿತಿಗೆ ತರಲು ಹಾಗೂ ಶಾಂತಿ ಮರು ಸ್ಥಾಪಿಸಲು ಬಲಿಷ್ಢ ಸರ್ಕಾರ ಸ್ಥಾಪಿಸುವುದೇ ಏಕೈಕ ಮಾರ್ಗ ಎಂದು ನಾವು ಭಾವಿಸುತ್ತೇವೆ ಎಂದು ಶಾಸಕರು ತಿಳಿಸಿದ್ದಾರೆ.




