ಬೀಜಿಂಗ್: ಚೀನಾದ ಲಿಯಾಒನಿಂಗ್ ಪ್ರಾಂತ್ಯದಲ್ಲಿರುವ ಲಿಯಾಒಯಾಂಗ್ ಪಟ್ಟಣದ ರೆಸ್ಟೋರೆಂಟ್‌ನಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ದುರಂತದಲ್ಲಿ 22 ಮಂದಿ ಮೃತಪಟ್ಟಿದ್ದಾರೆ.
'ಬೆಳಿಗ್ಗೆ 12.25ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿಯೇ 22 ಮಂದಿ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ' ಎಂದು ಸರ್ಕಾರಿ ಸ್ವಾಮ್ಯದ 'ಕ್ಸಿನುವಾ' ಸುದ್ದಿಸಂಸ್ಥೆ ವರದಿ ಮಾಡಿದೆ.ಬೆಂಕಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ.
'ದುರಂತದಲ್ಲಿ ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ' ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ತಿಳಿಸಿದ್ದಾರೆ.
ಈ ತಿಂಗಳಲ್ಲಿ ಚೀನಾದಲ್ಲಿ ಸಂಭವಿಸಿದ ಎರಡನೇ ಅತಿ ದೊಡ್ಡ ಬೆಂಕಿ ದುರಂತ ಪ್ರಕರಣ ಇದಾಗಿದೆ.
ಉತ್ತರ ಚೀನಾದ ಹಬೆ ಪ್ರಾಂತ್ಯದ ನರ್ಸಿಂಗ್ ಹೋಂನಲ್ಲಿ ಏ.9ರಂದು ಸಂಭವಿಸಿದ ಬೆಂಕಿ ಅನಾಹುತದಿಂದ 20 ಮಂದಿ ಮೃತಪಟ್ಟಿದ್ದರು.

