ಲಖನೌ: ಅಯೋಧ್ಯೆಯ ರಾಮ ಮಂದಿರದಲ್ಲಿ ಮುಂದಿನ ತಿಂಗಳು 'ರಾಮ ದರ್ಬಾರ್' ಶುರುವಾಗಲಿದೆ. ಇದು ಜೂನ್ 6ರಿಂದ ಭಕ್ತರ ದರ್ಶನಕ್ಕೆ ತೆರೆದಿರಲಿದೆ. ಆದರೆ, ಇದು ಪ್ರತಿಷ್ಠಾಪನಾ ಸಮಾರಂಭವಲ್ಲ ಎಂದು ದೇವಾಲಯ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.
'ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು 2024ರಲ್ಲಿ ದೇವಾಲಯದ ನೆಲ ಮಹಡಿಯಲ್ಲಿ ನಡೆಸಲಾಗಿದೆ. ಈಗ ಮೊದಲ ಮಹಡಿಯಲ್ಲಿರುವ ರಾಮ ದರ್ಬಾರ್‌ನಲ್ಲಿ ಇರಿಸಬೇಕಾದ ರಾಜ ರಾಮ (ರಾಜನಾಗಿ ರಾಮ್) ಸ್ಥಾಪನೆ ಸರದಿ. ಭಗವಾನ್ ರಾಮ, ಆತನ ಸಹೋದರರು ಮತ್ತು ದೇವತೆ ಸೀತೆಯ ವಿಗ್ರಹಗಳನ್ನು ಅಯೋಧ್ಯೆಗೆ ತಂದು, ಮೇ 23ರಂದು ದೇವಾಲಯದ ಮೊದಲ ಮಹಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು' ಎಂದು ಮಿಶ್ರಾ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಜೈಪುರದ ಬಿಳಿ ಅಮೃತಶಿಲೆಯಲ್ಲಿ ಕೆತ್ತಲಾದ ಸುಮಾರು 5 ಅಡಿ ಎತ್ತರದ ರಾಮನ ಪ್ರತಿಮೆಯು ರಾಮ ದರ್ಬಾರ್‌ನ ಭಾಗವಾಗಿದ್ದು, ಇದರಲ್ಲಿ ಸೀತಾ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮಂತನ ವಿಗ್ರಹಗಳೂ ಇರಲಿವೆ.
'ಮೇ 23 ಮತ್ತು ಜೂನ್ 5 ಈ ಎರಡು ದಿನಾಂಕಗಳು ಗ್ರಹಗತಿಯಿಂದ ಶುಭವಾಗಿವೆ. ಹಾಗಾಗಿ, ಮೇ 23ರಂದು ರಾಮ ದರ್ಬಾರ್ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಜೂನ್ 5ರಂದು ಧಾರ್ಮಿಕ ಪೂಜೆಗಳನ್ನು ನಡೆಸಿದ ನಂತರ ಜೂನ್ 6ರಿಂದ ರಾಮ್ ದರ್ಬಾರ್ ಅನ್ನು ಭಕ್ತರ ದರ್ಶನಕ್ಕೆ ತೆರೆಯಲಾಗುವುದು' ಎಂದು ಮಿಶ್ರಾ ತಿಳಿಸಿದ್ದಾರೆ.
ಜೂನ್ 5 ರೊಳಗೆ ಇಡೀ ದೇವಾಲಯ ಸಿದ್ಧವಾಗುತ್ತದೆಯೇ ಎಂದು ಕೇಳಿದಾಗ, 'ಹೌದು, ಅದೇ ದಿನ ಎರಡನೇ ಮಹಡಿಯೂ ಸಿದ್ಧವಾಗಲಿದೆ. ಮುಖ್ಯ ದೇಗುಲ ನಿರ್ಮಾಣ ಪೂರ್ಣಗೊಳ್ಳಲಿದ್ದು, ಆವರಣ ಗೋಡೆಯ ನಿರ್ಮಾಣ ಪೂರ್ಣಕ್ಕೆ ಇನ್ನೂ ಕೆಲವು ತಿಂಗಳು ಬೇಕಾಗಲಿದೆ. ಜೂನ್ 6ರೊಳಗೆ, ಮಹರ್ಷಿ ವಾಲ್ಮೀಕಿ ದೇವಾಲಯದಂತಹ ರಾಮ ದೇವಾಲಯದ ಹೊರಗಿನ ಇತರ ಏಳು ದೇವಾಲಯಗಳು ಪೂರ್ಣವಾಗಲಿವೆ' ಎಂದು ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮವು, 2020ರಲ್ಲಿ ಪ್ರಾರಂಭವಾದ ದೇವಾಲಯದ ನಿರ್ಮಾಣ ಪೂರ್ಣಗೊಳಿಸುವಿಕೆಯ ಸೂಚಕವಾಗಿದೆ. 2024ರಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆಯ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.




